ನವದೆಹಲಿ: ಕೊರೋನಾ ಸಾಂಕ್ರಾಮಿಕದಿಂದ ನೆಲಕಚ್ಚಿದ್ದ ಐಸ್ ಕ್ರೀಮ್ ಮಾರುಕಟ್ಟೆ ಹಾಲಿ ದೇಶಾದ್ಯಂತ ವ್ಯಾಪಕವಾಗಿರುವ ಉಷ್ಣ ಅಲೆಗಳ ಪರಿಣಾಮ 2 ವರ್ಷಗಳ ಬಳಿಕ ಚೇತರಿಸಿಕೊಂಡಿದೆ.
2 ವರ್ಷಗಳ ಹಿಂದೆ ಕೊರೋನಾ ಸಾಂಕ್ರಮಿಕದಿಂದಾಗಿ ಐಸ್ ಕ್ರೀಮ್ ಮಾರುಕಟ್ಟೆ ಅಕ್ಷರಶಃ ನೆಲಕಚ್ಚಿತ್ತು. ಕೋವಿಡ್ ನಿರ್ಬಂಧಗಳು ಮತ್ತು ಕೊರೋನಾ ಸಾಂಕ್ರಾಮಿಕ ಅಘೋಷಿತವಾಗಿ ಶೀತ ಪದಾರ್ಥಗಳ ಮೇಲೆ ಹೇರಿದ್ದ ನಿಷೇಧ ಐಸ್ ಕ್ರೀಮ್ ಮಾರುಕಟ್ಟೆ ನೆಲಕಚ್ಚುವಂತೆ ಮಾಡಿತ್ತು. ಆದರೆ ಕಳೆದೊಂದು ತಿಂಗಳಿನಿಂದ ದೇಶದಲ್ಲಿ ವ್ಯಾಪಕವಾಗಿರುವ ಉಷ್ಣ ಅಲೆಗಳು ಮಾರುಕಟ್ಟೆ ಚೇತರಿಕೆಗೆ ಕಾರಣವಾಗಿವೆ. ಬೇಸಿಗೆ ಧಗೆಯಿಂದ ತಪ್ಪಿಸಿಕೊಳ್ಳಲು ಜನತೆ ಐಸ್ ಕ್ರೀಮ್ ಗಳ ಮೊರೆ ಹೋಗುತ್ತಿದ್ದಾರೆ.
ಈ ವರ್ಷ ಐಸ್ ಕ್ರೀಂ ಮಾರುಕಟ್ಟೆ ಸರಾಸರಿ ಶೇ.15ರಷ್ಟು ಬೆಳವಣಿಗೆ ಕಾಣುತ್ತಿದೆ ಎಂದು ಭಾರತೀಯ ಐಸ್ ಕ್ರೀಮ್ ತಯಾರಕರ ಸಂಘ (ಐಐಸಿಎಂಎ) ಹೇಳಿದೆ. ಕೆಲವು ಕಂಪನಿಗಳು, ವಾಸ್ತವವಾಗಿ, ಈ ಋತುವಿನಲ್ಲಿ 50 ಪ್ರತಿಶತದಷ್ಟು ಬೆಳವಣಿಗೆಯನ್ನು ಕಾಣುತ್ತಿವೆ. COVID-19 ಸಾಂಕ್ರಾಮಿಕವು ಕಳೆದ ಎರಡು ವರ್ಷಗಳಲ್ಲಿ ಉದ್ಯಮದ ಮೇಲೆ ಭಾರಿ ಹಾನಿಯನ್ನುಂಟುಮಾಡಿತ್ತು. ಆದರೆ ಈ ವರ್ಷ ಉದ್ಯಮ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಅಂದಾಜು ವಾರ್ಷಿಕ ಭಾರತೀಯ ಐಸ್ ಕ್ರೀಮ್ ಮಾರುಕಟ್ಟೆಯು ಸುಮಾರು 10,000 ಕೋಟಿ ರೂ ದಿಂದ -ರೂ. 15,000 ಕೋಟಿ ರೂವರೆಗೂ ಇತ್ತು. ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸುಮಾರು ಶೇ. 50-70 ಪ್ರತಿಶತದಷ್ಟು ನಷ್ಟ ಆಗಿದೆ ಎಂದು IICMA ಅಧ್ಯಕ್ಷ ಸುಧೀರ್ ಶಾ ಹೇಳಿದ್ದಾರೆ. ಅಲ್ಲದೆ COVID ನಿಂದಾಗಿ, ಅನೇಕ ಸಣ್ಣ ಕಂಪನಿಗಳು ನಾಶವಾಗಿವೆ. ಅವುಗಳ ಪೈಕಿ ಹಲವು ಕಂಪನಿಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿವೆ. ಆದರೆ ಹಾಲಿ ವರ್ಷದ ಉಷ್ಣ ಅಲೆ ಪರಿಣಾಮದಿಂದಾಗಿ ಐಸ್ ಕ್ರೀಂ ಮಾರುಕಟ್ಟೆ ಚೇತರಿಸಿಕೊಂಡಿದ್ದು, ಈ ವರ್ಷ ಬೇಡಿಕೆಯು ಪೂರೈಕೆಯನ್ನು ಮೀರಿದೆ. ಮಾರುಕಟ್ಟೆಯ ಬೇಡಿಕೆಯ ಸರಿಯಾದ ಅಂದಾಜು ಕೊರತೆಯಿಂದಾಗಿ ತಯಾರಕರು ಅದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ, ಕೆಲವು ಕಂಪನಿಗಳು ಪ್ರಸ್ತುತ ಋತುವಿನಲ್ಲಿ ಬೇಡಿಕೆಯನ್ನು ಪೂರೈಸಲು ಸಮರ್ಥವಾಗಿವೆ ಮತ್ತು ಇದರಿಂದ ಅವರ ಸಂಸ್ಥೆಯ ಆದಾಯ ಶೇ.50 ರಷ್ಟು ಬೆಳೆಯಲು ಶಕ್ತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ವರ್ಷದ ಮಾರಾಟದ ಕುರಿತು ಮಾಹಿತಿ ನೀಡಿದ ಷಾ, ಹಾಲಿ ವರ್ಷದ ನಿಖರವಾದ ಮಾಹಿತಿಯು ಇನ್ನೂ ಲಭ್ಯವಿಲ್ಲದಿದ್ದರೂ, ಪ್ರಸಕ್ತ ವರ್ಷದ ಭಾರತೀಯ ಐಸ್ ಕ್ರೀಮ್ ಮಾರುಕಟ್ಟೆಯ ಅಂದಾಜು ದತ್ತಾಂಶವು ಸುಮಾರು 25,000 ಕೋಟಿ ರೂ. ಆದಾಯ ದಾಟಿದೆ. ಈ ವೇಗವು ಮುಂದುವರಿದರೆ, ಉದ್ಯಮವು ಅಂತಿಮವಾಗಿ ಕಳೆದ ಮೂರು ವರ್ಷಗಳ ಹಿಂದಿದ್ದ ಐಸ್ ಕ್ರೀಮ್ ಮಾರಾಟದ ಪರಿಸ್ಥಿತಿಯ ನೋಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಐಸ್ ಕ್ರೀಮ್ ಮಾರುಕಟ್ಟೆ ಸಾಂಕ್ರಾಮಿಕ-ಪೂರ್ವ ವರ್ಷ ಅಂದರೆ 2019ರಲ್ಲಿ ಸುಮಾರು ಶೇ.40-50 ಪ್ರತಿಶತ ಬೆಳವಣಿಗೆ ಕಂಡಿತ್ತು. ಆದರೆ ಸಾಂಕ್ರಾಮಿಕ ಸಂದರ್ಭದಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ನೋಡಿದ್ದೇವೆ. ಹಾಲಿ ಪರಿಸ್ಥಿತಿ ಆಶಾದಾಯಕವಾಗಿದ್ದು, ಈ ತ್ರೈಮಾಸಿಕದಲ್ಲಿ 40-50 ರಷ್ಟು ಬೆಳವಣಿಗೆಯನ್ನು ನಾವು ನಿರೀಕ್ಷಿಸುತ್ತೇವೆ. ಹೊಸ ಮಾರುಕಟ್ಟೆಗಳು ಸಹ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ ಎಂದು ನ್ಯಾಚುರಲ್ಸ್ ಐಸ್ ಕ್ರೀಮ್ಸ್ ನಿರ್ದೇಶಕ (ಕಾಮತ್ಸ್ ಅವರ್‌ಟೈಮ್ಸ್ ಐಸ್ ಕ್ರೀಮ್ಸ್ ಪ್ರೈ. ಲಿಮಿಟೆಡ್) ಸಿದ್ಧಾಂತ್ ಕಾಮತ್ ಹೇಳಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್‌ನಲ್ಲಿ, ಚಿಲ್ಲರೆ ಮಾರುಕಟ್ಟೆ ಸುಮಾರು ಮೂರು ಪಟ್ಟು ಮಾರಾಟವನ್ನು ಕಂಡಿತು. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಈ ವರ್ಷ ಮಾರ್ಚ್ ನಲ್ಲಿ 1.4 ಪಟ್ಟು ಬೆಳವಣಿಗೆಯನ್ನು ಕಂಡಿದ್ದರೆ. ಏಪ್ರಿಲ್ ವೇಳೆ ಅಂತ್ಯದ ವೇಳೆ 3.2 ಪಟ್ಟು ಬೆಳವಣಿಗೆ ಕಂಡಿದ್ದೇವೆ ಎಂದು, ಬಿಝೋಮ್ ಮುಖ್ಯಸ್ಥ ಅಕ್ಷಯ್ ಡಿಸೋಜಾ ಹೇಳಿದ್ದಾರೆ. 100 ವರ್ಷಗಳಲ್ಲಿ ಅತ್ಯಂತ ಬಿಸಿಯಾದ ಮಾರ್ಚ್ ತಿಂಗಳ ಕಂಡಿದ್ದೇವೆ. ಅಂತೆಯೇ ಭಾರತದ ಹೆಚ್ಚಿನ ಭಾಗಗಳಲ್ಲಿ ಶಾಖದ ಅಲೆಗಳು ಮುಂದುವರಿದಿದೆ. ಹೀಗಾಗಿ ಪ್ರಸ್ತುತ ಬೇಡಿಕೆ ಹೆಚ್ಚಿದೆ. ಗ್ರಾಹಕರು ಗಣನೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಐಸ್ ಕ್ರೀಂ ಸೇವಿಸುತ್ತಿದ್ದಾರೆ ಎಂದು ಅವರು ಹೇಳಿದರು.





