ನವದೆಹಲಿ: ನಿವಾಸಿಗಳು ತಮ್ಮ ವಸತಿ ಪ್ರದೇಶಗಳಲ್ಲಿ ಬೀದಿನಾಯಿಗಳಿಗೆ ಆಹಾರ ನೀಡಲು ಅನುಮತಿ ನೀಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ. ಈ ಮೂಲಕ ಬೀದಿನಾಯಿಗಳಿಗೆ ಆಹಾರದ ಹಕ್ಕಿದೆ ಮತ್ತು ನಾಗರಿಕರಿಗೆ ಆಹಾರ ನೀಡುವ ಹಕ್ಕಿದೆ ಎಂದು 2021 ರ ದೆಹಲಿ ಹೈಕೋರ್ಟ್ ತೀರ್ಪಿನ ಮೇಲೆ ಸುಪ್ರೀಂ ಕೋರ್ಟ್ ತನ್ನ ತಡೆಯಾಜ್ಞೆಯನ್ನು ತೆರವುಗೊಳಿಸಿದೆ.
ನಿವಾಸಿಗಳು ಆಹಾರ ನೀಡುವುದರಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ ಮಾರ್ಚ್ 4ರಂದು ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.
ನ್ಯಾಯಮೂರ್ತಿಗಳಾದ ಉದಯ್ ಉಮೇಶ್ ಲಲಿತ್, ಎಸ್ ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಹ್ಯೂಮನ್ ಫೌಂಡೇಶನ್ ಫಾರ್ ಪೀಪಲ್ ಅಂಡ್ ಅನಿಮಲ್ಸ್ ಸಲ್ಲಿಸಿದ್ದ ಅರ್ಜಿಗೆ ತಡೆಯಾಜ್ಞೆ ನೀಡಿತ್ತು. ಹ್ಯೂಮನ್ ಫೌಂಡೇಶನ್ ಫಾರ್ ಪೀಪಲ್ ಅಂಡ್ ಅನಿಮಲ್ಸ್ ಪ್ರಕರಣದ ವಿಚಾರಣೆಯ ಕಕ್ಷಿದಾರರಾಗಿರದಿದ್ರೂ ರಿಟ್ ಅರ್ಜಿ ಸಲ್ಲಿಸಿತ್ತು.
ಮೂಲ ಕಕ್ಷಿದಾರರು ತಮ್ಮ ವಿವಾದವನ್ನು ಬಗೆಹರಿಸಿರುವುದರಿಂದ ಎನ್‌ಜಿಒ ಸಲ್ಲಿಸಿದ ಮೇಲ್ಮನವಿಯು ನಂತರದ ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸ್ಥಾನವನ್ನು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬೀದಿನಾಯಿಗಳ ಬಗ್ಗೆ ಕನಿಕರ ಹೊಂದಿರುವ ಯಾವುದೇ ವ್ಯಕ್ತಿಯು ಅವರ ಖಾಸಗಿ ಪ್ರವೇಶದ್ವಾರದಲ್ಲಿ ಅಥವಾ ಇತರ ನಿವಾಸಿಗಳೊಂದಿಗೆ ಹಂಚಿಕೊಳ್ಳದ ಯಾವುದೇ ಸ್ಥಳದಲ್ಲಿ ಆಹಾರ ನೀಡಬಹುದು. ನಾಯಿ ಇತರರಿಗೆ ಹಾನಿ ಅಥವಾ ಕಿರುಕುಳವನ್ನು ಉಂಟು ಮಾಡದಿದ್ದಲ್ಲಿ ನಾಯಿಗಳಿಗೆ ಆಹಾರವನ್ನು ನೀಡುವುದನ್ನು ಯಾರೂ ನಿರ್ಬಂಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು.
ತಮ್ಮ ಕಾಲೋನಿಯಲ್ಲಿರುವ ನಾಯಿಗಳಿಗೆ ಆಹಾರ ನೀಡುವ ವಿಚಾರವಾಗಿ ಅದೇ ಪ್ರದೇಶದ ಇಬ್ಬರು ನಿವಾಸಿಗಳ ನಡುವೆ ಆರಂಭದಲ್ಲಿ ಜಗಳವಾಗಿತ್ತು. ಅವರ ನಡುವೆ ಕೊನೆಗೆ ನಿರ್ಣಯಕ್ಕೆ ಬಂದು ನಿಗದಿತ ಸ್ಥಳದಲ್ಲಿ ಗೊತ್ತುಪಡಿಸಿ ಅಲ್ಲಿ ಬೀದಿನಾಯಿಗೆ ಆಹಾರ ನೀಡಬಹುದೆಂದು ಗೊತ್ತುಪಡಿಸಿದ ನಂತರ ಇಬ್ಬರ ನಡುವಿನ ವಿವಾದ ಕೊನೆಗೊಂಡಿತ್ತು.





