ಬದಿಯಡ್ಕ : ಗಾನಕೋಗಿಲೆ ಕಲಾವಿದರ ವೇದಿಕೆ ಬದಿಯಡ್ಕ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶುಕ್ರವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಜರುಗಿತು.
ಕಮ್ಮಾರಿಕೆ ವಲಯದಲ್ಲಿ ಕಳೆದ 50 ವರ್ಷಗಳಿಂದ ಸತತ ಸಾಧನೆ ನಡೆಸುತ್ತಿರುವ ಕಾಡಮನೆ ಲಕ್ಷ್ಮಣ ಆಚಾರ್ಯರಿಗೆ ಗೌರವಾರ್ಪಣೆ ನಡೆಯಿತು. ನಿತ್ಯೋಪಯೋಗಿ ಸಾಮಾಗ್ರಿಗಳಿಂದ ತೊಡಗಿ ದೈವಗಳ ಮೊಗ, ಆಯುಧಗಳ ನಿರ್ಮಾಣ ವರೆಗಿನ ತಯಾರಿಯಲ್ಲಿ ಸಿದ್ಧಹಸ್ತರಾದ ಅವರಿಗೆ ಈ ವೇಳೆ ಹಾರ್ದಿಕ ಅಭಿನಂದನೆ ನಡೆಯಿತು. ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂತಾ ಬಾರಡ್ಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸ್ಥಳೀಯ ಮಟ್ಟದ ಸಾಧಕರನ್ನು ಗುರುತಿಸಿ, ಅವರನ್ನು ಪ್ರಧಾನ ವಾಹಿನಿಯಲ್ಲಿ ಗೌರವಿಸುವುದು ಶ್ಲಾಘನೀಯ ಕಾರ್ಯ. ಎಲೆಮರೆಯ ಕಾಯಿಯಂತಿರುವ ಪ್ರತಿಭಾವಂತರನ್ನು ಗುರುತಿಸುವಲ್ಲಿ ನಡೆಸುವ ಚಟುವಟಿಕೆ ಇತರರಿಗೆ ಮಾದರಿ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಕ ಗುರುಪ್ರಸಾದ್ ರೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬದಿಯಡ್ಕ ವಲಯ ಸಂಚಾಲಕ ದಿನೇಶ್ ಕೊಕ್ಕಡ, ಸಾಂಸ್ಕೃತಿಕ ನೇತಾರ ಗಂಗಾಧರ ಆಳ್ವ, ಪತ್ರಕರ್ತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ವೈದಿಕ ವಿದ್ವಾಂಸ, ಸಾಹಿತಿ ಉದನೇಶ್ವರ ಪ್ರಸಾದ ಮೂಲಡ್ಕ ಇದ್ದರು. ವೇದಿಕೆಯ ಅಧ್ಯಕ್ಷ, ಗಾಯಕ ವಸಂತ ಬಾರಡ್ಕ ಸ್ವಾಗತಿಸಿದರು. ಪತ್ರಕರ್ತ ವೀಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಶಾಮ ಪಾಡಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ವೇದಿಕೆಯ ಸದಸ್ಯರಾದ ಮುರಳಿ ನೀರ್ಚಾಲ್, ಪ್ರದೀಪ ಆಚಾರ್ಯ ಕಡಂಬಾರು, ಶ್ರೀದೇವಿ ಉದನೇಶ್ವರ ಪ್ರಸಾದ್, ಜಯಲಕ್ಷ್ಮಿ, ಅಂಜಲಿ, ಅನೃತಾ ಹಾಡುಗಳನ್ನು ಆಲಾಪಿಸಿ ರಂಜಿಸಿದರು.





