HEALTH TIPS

ಹೈದರಾಬಾದ್ ಗ್ಯಾಂಗ್ ರೇಪ್ ಆರೋಪಿಗಳ ಎನ್ ಕೌಂಟರ್ ಉದ್ದೇಶಪೂರ್ವಕ ಕೊಲೆ, ಪೊಲೀಸರ ವಿರುದ್ಧ ಕ್ರಮ ಅಗತ್ಯ: ಸುಪ್ರೀಂ ಸಮಿತಿ

              ನವದೆಹಲಿ: ನಿರ್ಭಯಾ ಪ್ರಕರಣದ ಬಳಿಕ ಇಡೀ ದೇಶವನ್ನ ಬೆಚ್ಚಿಬೀಳಿಸಿದ್ದ ಹೈದರಾಬಾದ್ ನಲ್ಲಿ ಪಶುವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಈಗ ಮತ್ತೆ ಸುದ್ದಿಯಲ್ಲಿದೆ. ತೆಲಂಗಾಣದ ಹೈದರಾಬಾದ್‌ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಹೆಸರಿನಲ್ಲಿ ಉದ್ದೇಶಪೂರ್ವಕವಾಗಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

             ನ್ಯಾಯಮೂರ್ತಿ ವಿಎಸ್ ಸಿರ್ಪುರ್ಕರ್ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿ ಪ್ರಕರಣದ ತನಿಖೆಯಲ್ಲಿ ಸ್ಪಷ್ಟ ಲೋಪವನ್ನು ಎತ್ತಿ ತೋರಿಸಿದೆ ಮತ್ತು ಆರೋಪಿಗಳನ್ನು ಎನ್ ಕೌಂಟರ್ ಮಾಡಿದ 10 ಪೊಲೀಸರನ್ನು ಕೊಲೆ ಆರೋಪದ ಮೇಲೆ ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಿದೆ. ಜೊತೆಗೆ ಹತ್ಯೆಯಾದ ನಾಲ್ವರಲ್ಲಿ ಮೂವರು ಅಪ್ರಾಪ್ತ ವಯಸ್ಕರಾಗಿದ್ದರು ವರದಿ ಹೇಳಿದೆ. ಪ್ರಕರಣದಲ್ಲಿ  ಜೋಲು ಶಿವ, ಜೋಲು ನವೀನ್ ಮತ್ತು ಚಿಂತಕುಂಟಾ ಚೆನ್ನಕೇಶವುಲು ಅವರು ಅಪ್ರಾಪ್ತರಾಗಿದ್ದರು ಎಂದು ಸಮಿತಿ ತಿಳಿಸಿದೆ.

               2019 ರ ನವೆಂಬರ್‌ನಲ್ಲಿ ಪಶು ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಾದ ಮೊಹಮ್ಮದ್ ಆರಿಫ್, ಚಿಂತಕುಂಟಾ ಚೆನ್ನಕೇಶವುಲು, ಜೋಲು ಶಿವ ಮತ್ತು ಜೊಲ್ಲು ನವೀನ್ ಅವರನ್ನು ಬಂಧಿಸಲಾಗಿತ್ತು. ಸ್ಥಳ ಪರಿಶೀಲನೆ ವೇಳೆ ನಾಲ್ವರು ಆರೋಪಿಗಳನ್ನು ಹೈದರಾಬಾದ್ ಬಳಿ ಎನ್ ಹೆಚ್ -44 ನಲ್ಲಿ ಎನ್ಕೌಂಟರ್ ಮಾಡಲಾಗಿತ್ತು. ಇದೇ ಹೆದ್ದಾರಿಯಲ್ಲಿ ಆರೋಪಿಗಳು 27 ವರ್ಷದ ಪಶುವೈದ್ಯೆಯನ್ನು ಸುಟ್ಟು ಹಾಕಿದ್ದರು

              ನವೆಂಬರ್ 27, 2019 ರಂದು ಮಹಿಳಾ ಪಶುವೈದ್ಯರನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದರು. ಬಳಿಕ ಆರೋಪಿಗಳು ಮಹಿಳೆಯ ದೇಹವನ್ನು ಸುಟ್ಟು ಹಾಕಿದ್ದರು. ಸ್ಥಳ ಪರಿಶೀಲನೆ ವೇಳೆ ಆರೋಪಿಗಳು ಪೊಲೀಸರ ಮೇಲೇ ಹಲ್ಲೆಗೆ ಮುಂದಾದರೆಂದು ಎನ್ ಕೌಂಟರ್ ನಡೆಸಲಾಗಿದೆ ಎಂದು ವರದಿಯಾಗಿತ್ತು.

              ಹೈದರಾಬಾದ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಎನ್‌ಕೌಂಟರ್ ಹತ್ಯೆಗೆ ಸಂಬಂಧಿಸಿದಂತೆ ಮೂವರು ಸದಸ್ಯರ ತನಿಖಾ ಆಯೋಗ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಇಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದು, ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ತೆಲಂಗಾಣ ಹೈಕೋರ್ಟ್‌ಗೆ ವರ್ಗಾಯಿಸಿದೆ.

                  ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಎನ್‌ಕೌಂಟರ್ ಕುರಿತು ಅಂತಿಮ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ವಿಎಸ್ ಸಿರ್ಪುರ್ಕರ್ ನೇತೃತ್ವದ ಆಯೋಗಕ್ಕೆ ಕಳೆದ ವರ್ಷ ಆಗಸ್ಟ್ 3 ರಂದು ಸುಪ್ರೀಂ ಕೋರ್ಟ್ ಆರು ತಿಂಗಳ ಕಾಲಾವಕಾಶ ನೀಡಿತ್ತು.

              ಎನ್‌ಕೌಂಟರ್‌ಗೆ ಕಾರಣವಾದ ಸಂದರ್ಭಗಳ ಕುರಿತು ತನಿಖೆ ನಡೆಸಲು ಸಿರ್ಪುರ್ಕರ್ ಸಮಿತಿಯನ್ನು ಡಿಸೆಂಬರ್ 12, 2019 ರಂದು ಸ್ಥಾಪಿಸಲಾಯಿತು ಮತ್ತು ಆರು ತಿಂಗಳಲ್ಲಿ ವರದಿಯನ್ನು ಸಲ್ಲಿಸಬೇಕಿತ್ತು. ಆಯೋಗದ ಇತರ ಸದಸ್ಯರಲ್ಲಿ ಮಾಜಿ ಬಾಂಬೆ ಹೈಕೋರ್ಟ್ ನ್ಯಾಯಾಧೀಶೆ ರೇಖಾ ಸೊಂಡೂರ್ ಬಲ್ಡೋಟಾ ಮತ್ತು ಮಾಜಿ ಸಿಬಿಐ ನಿರ್ದೇಶಕ ಡಿಆರ್ ಕಾರ್ತಿಕೇಯನ್ ಇದ್ದರು. ಬಳಿಕ ತನಿಖಾ ಸಮಿತಿಯ ಅವಧಿಯನ್ನು ಮೂರು ಬಾರಿ ವಿಸ್ತರಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries