ನವದೆಹಲಿ: ಪಾಂಗಾಂಗ್ ಸರೋವರಕ್ಕೆ ಚೀನಾ ಸೇತುವೆ ನಿರ್ಮಿಸುತ್ತಿರುವುದು ಅಕ್ರಮ ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ.
ಪಾಂಗಾಂಗ್ ಸರೋವರಕ್ಕೆ ಚೀನಾ ನಿರ್ಮಿಸುತ್ತಿರುವ ಎರಡನೇ ಸೇತುವೆ 1960ರಿಂದಲೂ ಆ ದೇಶ ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಭಾರತ ಶುಕ್ರವಾರ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಅವರು, 'ಅಂಥ ಅತಿಕ್ರಮಣವನ್ನು ಭಾರತ ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
‘ಪಾಂಗಾಂಗ್ ಸರೋವರಕ್ಕೆ ಚೀನಾ ಈ ಮೊದಲಿನ ಸೇತುವೆ ಬಳಿ ಮತ್ತೊಂದು ಸೇತುವೆ ನಿರ್ಮಿಸುತ್ತಿರುವ ಬಗ್ಗೆ ವರದಿಗಳನ್ನು ನೋಡಿದ್ದೇವೆ. ಈ ಎರಡೂ ಸೇತುವೆಗಳು ಅಕ್ರಮ. 1960ರಿಂದಲೂ ಚೀನಾ ಅತಿಕ್ರಮಿಸಿರುವ ಪ್ರದೇಶದಲ್ಲೇ ಬರುತ್ತದೆ. ನಮ್ಮ ಭೂ ಪ್ರದೇಶದಲ್ಲಿ ಅಂಥ ಅಕ್ರಮ ನಿರ್ಮಾಣವನ್ನು ನಾವು ಒಪ್ಪುವುದಿಲ್ಲ. ನ್ಯಾಯಸಮ್ಮತವಲ್ಲದ ಚೀನಾದ ಪ್ರತಿಪಾದನೆಯನ್ನು ಒಪ್ಪಲಾಗದು. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ ಎಂದು ಹಲವು ಬಾರಿ ನಾವು ಸ್ಪಷ್ಟಪಡಿಸಿದ್ದೇವೆ. ನಮ್ಮ ದೇಶದ ಸಾರ್ವಭೌಮತ್ವವನ್ನು, ಭೌಗೋಳಿಕ ಸಮಗ್ರತೆಯನ್ನು ಇತರ ರಾಷ್ಟ್ರಗಳು ಗೌರವಿಸಬೇಕು ಎಂಬುದನ್ನು ನಾವು ಬಯಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ರಾಷ್ಟ್ರದ ಭದ್ರತಾ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, ಸರ್ಕಾರವು ವಿಶೇಷವಾಗಿ 2014 ರಿಂದ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣ ಸೇರಿದಂತೆ ಗಡಿ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಹೆಚ್ಚಿಸಿದೆ. ಭಾರತದ ಕಾರ್ಯತಂತ್ರ ಮತ್ತು ಭದ್ರತಾ ಅವಶ್ಯಕತೆಗಳನ್ನು ಪೂರೈಸಲು ಮಾತ್ರವಲ್ಲದೆ ಈ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವಂತೆ ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ರಚಿಸುವ ಉದ್ದೇಶಕ್ಕೆ ಸರ್ಕಾರ ಬದ್ಧವಾಗಿದೆ. ಭಾರತದ ಭದ್ರತೆಯ ಮೇಲೆ ಪ್ರಭಾವ ಬೀರುವ ಎಲ್ಲಾ ಬೆಳವಣಿಗೆಗಳ ಮೇಲೆ ಸರ್ಕಾರವು ನಿರಂತರ ನಿಗಾ ಇರಿಸುತ್ತದೆ ಮತ್ತು ಅದರ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.





