ಕಾಸರಗೋಡು: ಮುಳಿಯಾರ್ ಪಂಚಾಯಿತಿಯ ಮುದಲಪ್ಪಾರೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಗ್ರಾಮವನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಎಂಡೋಸಲ್ಫಾನ್ ಪುನರ್ವಸತಿ ಕೋಶದ ಅಧ್ಯಕ್ಷ, ಸ್ಥಳೀಯಾಡಳಿತ ಮತ್ತು ಅಬಕಾರಿ ಖಾತೆ ಸಚಿವ ಎಂ.ವಿ.ಗೋವಿಂದನ್ ತಿಳಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕೋಶದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಳಿಯಾರ್ ಪುನರ್ವಸತಿ ಗ್ರಾಮವನ್ನು ತಿರುವನಂತಪುರದಲ್ಲಿರುವ ಡಿಫರೆಂಟ್ ಆಟ್ರ್ಸ್ ಸೆಂಟರ್ ಮಾದರಿಯಲ್ಲಿ ವಿಶ್ವದರ್ಜೆಯ ಕಟ್ಟಡವನ್ನು ಮುಳಿಯಾರಿನಲ್ಲಿ ಮಂಜೂರಾಗಿರುವ 25 ಎಕರೆ ಜಾಗದಲ್ಲಿ ನಿರ್ಮಿಸಲು ಯೋಜನೆಯಿರಿಸಿಕೊಳ್ಳಲಾಗಿದೆ.ಸುಪ್ರಿಂ ಕೋರ್ಟ್ ಆದೇಶದಂತೆ ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ವಿತರಣೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಜುಲೈ ಅಂತ್ಯದ ವೇಳೆಗೆ ಹೆಚ್ಚಿನ ಸಂತ್ರಸ್ತರಿಗೆ ಹಣ ಬಿಡುಗಡೆ ಮಾಡಲಾಗುವುದು. ಇಲ್ಲಿಯವರೆಗೆ 1308 ಮಂದಿಗೆ 51.68 ಕೋಟಿ ಮಂಜೂರಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಜಾರಿಗೂ ಮುನ್ನ ಎಂಡೋಸಲ್ಫಾನ್ ಸಂತ್ರಸ್ತರಿಗೆ ರೂ.287,76,140 ರೂ. ನೀಡಲಾಗಿದೆ ಎಂದು ತಿಳಿಸಿದರು.
ವೈದ್ಯಕೀಯ ಬೋರ್ಡ್:
ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿರುವ ರೋಗಿಯು ಅದೇ ಸ್ಥಿತಿ ಹೊಂದಿರುವ ಮತ್ತೊಬ್ಬ ರೋಗಿ ತನ್ನ ಮನೆಯಲ್ಲಿ ಇದ್ದಲ್ಲಿ, ಅವರಲ್ಲಿ ರೋಗ ಇರುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಪರೀಕ್ಷೆಗಳನ್ನು ನಡೆಸುವ ನಿಟ್ಟಿನಲ್ಲಿ ವಿಶೇಷ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದರು.





