ನವದೆಹಲಿ: ದೇಶದಲ್ಲಿ ಸಾಕಷ್ಟು ಅಕ್ಕಿ ಸಂಗ್ರಹವಿದ್ದು, ರಫ್ತು ನಿಷೇಧಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಗೋಧಿ ಮತ್ತು ಸಕ್ಕರೆ ರಫ್ತು ನಿಷೇಧಿಸಿರುವ ಕೇಂದ್ರ ಸರ್ಕಾರ ಅಕ್ಕಿ ರಫ್ತು ಮೇಲೂ ನಿಷೇಧ ಹೇರಲಿದೆ ಎಂಬ ಊಹಾಪೋಹಗಳು ದಟ್ಟವಾಗಿ ಹರಡಿದ್ದವು.
ಭಾರತವು ಮೇ 13ರಂದು ಗೋಧಿ ರಫ್ತು ಮೇಲೆ ನಿಷೇಧ ಹೇರಿತ್ತು ಹಾಗೂ ಮುಂಬರುವ ಹಬ್ಬದ ಋತುವಿನಲ್ಲಿ ಸಕ್ಕರೆಗೆ ಬೇಡಿಕೆ ಉಂಟಾಗಬಹುದೆಂದು ಅದರ ರಫ್ತನ್ನು 10 ಮಿಲಿಯನ್ ಮೆಟ್ರಿಕ್ ಟನ್ಗೆ ಸೀಮಿತಗೊಳಿಸಿತ್ತು. ಸರ್ಕಾರದ ಈ ನಿರ್ಧಾರಗಳಿಂದ ಹಣದುಬ್ಬರ ಹೆಚ್ಚಳವಾಗಿ ಮಧ್ಯಮ ಮತ್ತು ಕೆಳ ಮಧ್ಯಮದ ಕುಟುಂಬಗಳಿಗೆ ತೀವ್ರ ಹೊಡೆತ ಬಿತ್ತು. ಚಿಲ್ಲರೆ ಹಣದುಬ್ಬರವು ಎಂಟು ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ಜಿಗಿಯಿತು. ಏಪ್ರಿಲ್ನಲ್ಲಿ ಆಹಾರ ಹಣದುಬ್ಬರವು ದಾಖಲೆಯ ಶೇ. 8.38ಕ್ಕೆ ತಲುಪಿತು. ಆದರೆ ಮೇ ತಿಂಗಳಿನಲ್ಲಿ ಆಹಾರ ಹಣದುಬ್ಬರವು ತುಸು ಇಳಿಕೆಯಾಗಿ ಶೇ. 7.97ಕ್ಕೆ ಬಂದು ನಿಂತಿದೆ.
20 ದೇಶಗಳಿಂದ ರಫ್ತು ನಿಷೇಧ: ರಷ್ಯಾ ಮತ್ತು ಯೂಕ್ರೇನ್ ನಡುವೆ ಯುದ್ಧ ಶುರುವಾದ ನಂತರ ಆಹಾರ ಪದಾರ್ಥಗಳ ಬೆಲೆ ಗಗನಮುಖಿಯಾಗಿದ್ದು, ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಸುಮಾರು 20 ದೇಶಗಳು ತಮ್ಮ ದೇಶದ ಆಹಾರ ಭದ್ರತೆಗಾಗಿ ರಫ್ತು ನಿಷೇಧಿಸಿವೆ. ವಿಶ್ವಸಂಸ್ಥೆಯು ತನ್ನ ಇತ್ತೀಚಿನ ವರದಿಯಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವನ್ನು ತಡೆಯಲು ಆಮದು ಮತ್ತು ರಫ್ತು ನಿರ್ಬಂಧವನ್ನು ತೆರವುಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದೆ. ಪ್ರಮುಖ ಆಹಾರ ಮತ್ತು ಸರಕುಗಳ ಪೂರೈಕೆಯನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಭವಿಷ್ಯದ ಪೂರೈಕೆಗಳು ಬೆಲೆ ಮತ್ತು ಹಣದುಬ್ಬರ ನಿರೀಕ್ಷೆ ಕಡಿಮೆ ಮಾಡಲು ಸಹಾಯಕವಾಗಲಿದೆ ಎಂದು ವರದಿ ಹೇಳಿದೆ.
ಪೋಷಕಾಂಶಗಳ ಕೊರತೆ: ಜಾಗತಿಕವಾಗಿ 2 ಶತಕೋಟಿಗಿಂತಲೂ ಹೆಚ್ಚು ಜನರು ಬಹು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಹೊಂದಿದ್ದಾರೆ. 1.6 ಶತಕೋಟಿ ಜನರು ರಕ್ತ ಹೀನತೆ, ಶೇ. 50ಕ್ಕಿಂತಲೂ ಹೆಚ್ಚು ಜನರು ಕಬ್ಬಿಣದ ಕೊರತೆಯನ್ನು ಹೊಂದಿದ್ದಾರೆ. ಪ್ರತಿವರ್ಷ 260,100 ಗರ್ಭಧಾರಣೆಗಳು ನ್ಯೂರಲ್ ಟ್ಯೂಬ್ ದೋಷಗಳಿಂದ (ಎನ್ಟಿಇಡಿ) ಪ್ರಭಾವಿತವಾಗಿದೆ. ಬಹು ಸೂಕ್ಷ್ಮ ಪೋಷಕಾಂಶಗಳ ಕೊರತೆಯು ಮರಣ, ರೋಗ ಮತ್ತು ದುರ್ಬಲ ಮಾನವ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ.
291 ಬರಪೀಡಿತ ಜಿಲ್ಲೆ: ಕೇಂದ್ರ ಸರ್ಕಾರ ಭತ್ತದ ಬಲವರ್ಧನೆ ಕಾರ್ಯಕ್ರಮಕ್ಕೆ 2023ರ ಮಾರ್ಚ್ನೊಳಗೆ 291 ಬರಪೀಡಿತ ಜಿಲ್ಲೆಗಳನ್ನು ಸೇರಿಸಲು ನಿರ್ಧರಿಸಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಎಡಿಎಸ್) ಮೂಲಕ ಸಾರವರ್ಧಿತ ಅಕ್ಕಿ ವಿತರಣೆಯ ಎರಡನೇ ಹಂತವನ್ನು ಏಪ್ರಿಲ್ 2022ರಲ್ಲಿ ಪ್ರಾರಂಭಿಸಲಾಗಿದೆ. ಅಕ್ಕಿ ಫೋರ್ಟಿಫಿಕೇಶನ್ಗೆ ವಾರ್ಷಿಕ 2,700 ಕೋಟಿ ವೆಚ್ಚವಾಗುತ್ತಿದ್ದು, ಅದು 2024 ಜೂನ್ ವೇಳೆಗೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರಲಿದ್ದು, ಅಲ್ಲಿಯವರೆಗೆ ಅದರ ವೆಚ್ಚವನ್ನು ಆಹಾರ ಸಬ್ಸಿಡಿಯ ಭಾಗವಾಗಿ ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಪಾಂಡೆ ಹೇಳಿದ್ದಾರೆ. ಇದಕ್ಕೂ ಮುನ್ನ ಕೇಂದ್ರದ ಪ್ರಾಯೋಜಿತ ಪೈಲಟ್ ಯೋಜನೆಯಾದ 'ಅಕ್ಕಿಯ ಸಾರವರ್ಧನೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅದರ ವಿತರಣೆ' ಯನ್ನು 2019-20ರಿಂದ ಮೂರು ವರ್ಷಗಳ ಅವಧಿಗೆ ಅನುಷ್ಠಾನಗೊಳಿಸಲಾಗಿದೆ. ಹನ್ನೊಂದು ರಾಜ್ಯಗಳು ಪ್ರಾಯೋಗಿಕ ಯೋಜನೆಯಡಿ ಗುರುತಿಸಿದ ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿಯನ್ನು ವಿತರಿಸಿವೆ.





