ಕಾಸರಗೋಡು: ಸೇವಾಭಾರತಿ ಕಾಸರಗೋಡು ವತಿಯಿಂದ ಎರಡು ಲಕ್ಷ ರೂ. ಹೆಚ್ಚು ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಜನರಲ್ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ. ರಾಜಾರಾಮ ಕೆ.ಕೆ ಅವರಿಗೆ ಉಪಕರಣಗಳನ್ನು ಹಸ್ತಾಂತರಿಸಲಾಯಿತು.
ಡಾ. ಜನಾರ್ದನ ನಾಯ್ಕ್, ಸ್ಟಾಫ್ ಕೌನ್ಸಿಲ್ ಅಧ್ಯಕ್ಷ ಡಾ. ಕೃಷ್ಣ ನಾಯ್ಕ್, ಐ.ಎಂ.ಎ ಅಧ್ಯಕ್ಷ ಡಾ. ನಾರಾಯಣ ನಾಯ್ಕ್, ನರ್ಸಿಂಗ್ ಸೂಪರಿಂಟೆಂಡೆಂಟ್ ಮೇರಿ ಎ.ಜೆ, ರಾಷ್ಟ್ರೀಯ ಸೇವಾ ಭಾರತಿ ಪದಾಧಿಕಾರಿಗಳಾದ ಗೋಪಾಲ ಚೆಟ್ಯಾರ್ ಪೆರ್ಲ, ಚೆನ್ನಯ್ಯ ಸ್ವಾಮಿ, ದಿನೇಶ್ ಎಂ.ಟಿ, ಕನಲಾಕ್ಷ ಕೆ.ಎನ್, ಹರೀಶ್ ಕುಮಾರ್ ಕೆ.ಎಂ. ತೇಜಸ್ವಿ ಹೇರಳ, ಪ್ರಮೋದ್ ಕುಮಾರ್ ಕೆ.ಆರ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಭಾರತಿ ಕಾಸರಗೋಡು ಸಮಿತಿ ವತಿಯಿಂದ ನಾನಾ ಸೇವಾ ಕಾರ್ಯಗಳು ನಡೆಯುತ್ತಿದ್ದು, ಕೋವಿಡ್ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯ ವಿವಿಧೆಡೆ ಉಚಿತ ಆಹಾರ, ಔಷಧ ವಿತರಣೆ ಮುಂತಾದ ಸೇವೆ ನಡೆದುಬರುತ್ತಿದೆ. ಜತೆಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯವಿರುವ ರಕ್ತದಾನ ಮಾಡುವ ಒಂದು ವಿಭಾಗ ಸೇವಾ ಭಾರತಿ ನೇತೃತ್ವದಲ್ಲಿ ನಡೆಯುತ್ತಿದೆ.


