ಕುಂಬಳೆ: ಶ್ರೀರಾಮ ಸತ್ಸಂಗ ಸಮಿತಿ ಇದರ ಆಶ್ರಯದಲ್ಲಿ ಕರ್ಕಟಕ ಮಾಸದ ಶ್ರೀರಾಮ ಕಥಾ ಸತ್ಸಂಗ ಹಾಗೂ ಶ್ರೀರಾಮ ನಾಮ ಜಪ ಧ್ಯಾನ ಕಾರ್ಯಕ್ರಮವು ಜು.17ರಿಂದ(ನಾಳೆ) ಕೃಷ್ಣ ನಗರ ಮೌನೇಶ ಮಂದಿರಲ್ಲಿ ಆಯೋಜಿಸಲಾಗಿದೆ. "ರಾಮಾದರ್ಶ ಜೀವನ, ಗ್ರಾಮಾ ದರ್ಶ ಮನೆ" ಎಂಬ ಧ್ಯೇಯೋದ್ದೇಶದಿಂದ ಒಂದು ವಾರಗಳ ಪರ್ಯಂತ ನಡೆಯುವ ಶ್ರೀರಾಮ ಕಥಾ ಸತ್ಸಂಗ ಪರಾಯಣ ಜು.23ರಂದು ಸಮಾಪ್ತಿಗೊಳ್ಳಲಿದೆ. ಕೀರ್ತನಾ ಪ್ರವೀಣ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ದಿನಂಪ್ರತಿ ಶ್ರೀರಾಮ ಚರಿತೆಯ ಸಂಕೀರ್ತನೆ ಹಾಗೂ ಕಥಾ ಪ್ರವಚನ ನಡೆಸಲಿದ್ದಾರೆ.
ಕಾರ್ಯಕ್ರಮಗಳ ವಿವರ: ಜು.17ರಂದು ಸಂಜೆ 3 ಗಂಟೆಗೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಶ್ರೀರಾಮ ದೇವರ ವಿಗ್ರಹವನ್ನು ಮೌನೇಶ ಮಂದಿರಕ್ಕೆ ಮೆರವಣಿಗೆ, 4.30ಕ್ಕೆ ಜರಗುವ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ರಘನಾಥ ಪೈ, ಸಾಮಾಜಿಕ ಮುಂದಾಳು ಶಿವರಾಮ ಬೀಚ್ ರೋಡು, ಸಜೇಶ್ ಪೆÇದುವಾಳ್, ಡಾ.ಕಿಶೋರ್ ಕುಮಾರ್, ನ್ಯಾಯವಾದಿ ಸದಾನಂದ ಕಾಮತ್, ಕಣಿಪುರ ಮಾಸಪತ್ರಿಕೆಯ ಸಂಪಾದಕ, ಲೇಖಕ ಎಂ.ನಾ.ಚಂಬಲ್ತಿಮಾರ್ ಭಾಗವಹಿಸುವರು. ಸಂಜೆ 5.45ಕ್ಕೆ ಭಜನೆ, 6.30ಕ್ಕೆ ಶ್ರೀರಾಮ ಕಥಾ ಸತ್ಸಂಗ ಬಳಿಕ 8 ಗಂಟೆಗೆ ನಿತ್ಯವೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಪ್ರತಿದಿನವೂ ಸಂಜೆ 5.45 ರಿಂದ ರಾತ್ರಿ 8 ಗಂಟೆಯ ವರೆಗೆ ಸತ್ಸಂಗ ಕಾರ್ಯಕ್ರಮ ಜರಗಲಿರುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಜು.23 ರಂದು ಸಂಜೆ 5 ಗಂಟೆಗೆ ಜರಗುವ ಸಮರೋಪ ಸಮಾರಂಭದಲ್ಲಿ ವೇದಮೂರ್ತಿ ಚಕ್ರಪಾಣಿ ದೇವ ಪೂಜಿತ್ತಾಯ, ಜಿತೇಂದ್ರ ಪ್ರತಾಪನಗರ, ಕಲಾರತ್ನ ಶಂ.ನಾ.ಅಡಿಗ ಕುಂಬಳೆ, ಡಾ.ಡಿ.ಪುರುಷೋತ್ತಮ ಭಟ್, ಉದ್ಯಮಿ ವಿಠಲ ಆಚಾರ್ಯ, ನಾಗೇಶ್ ಕಾರ್ಲೆ, ಶೋಭ ಎಸ್. ಮೊದಲಾದವರು ಭಾಗವಹಿಸುವರು.


