ತಿರುವನಂತಪುರ: ಅಶೋಕ ಸ್ತಂಭ ವಿವಾದದ ಬಗ್ಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಂಸತ್ತಿನಲ್ಲಿ ಸ್ಥಾಪಿಸಿರುವ ಅಶೋಕ ಸ್ತಂಭವನ್ನು ತಜ್ಞರು ವಿನ್ಯಾಸಗೊಳಿಸಿದ್ದು, ಅಶೋಕ ಸ್ತಂಭ ಹೇಗಿರಬೇಕು ಎಂದು ತನ್ನಂತವರು ಹೇಳಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.
ನೂತನ ಸಂಸತ್ ಕಟ್ಟಡ ನಿರ್ಮಿಸುವಾಗ, ಅದರ ವಿನ್ಯಾಸದ ಬಗ್ಗೆ ಅನೇಕ ಅಭಿಪ್ರಾಯಗಳಿವೆ. ಎಲ್ಲರೂ ಅದನ್ನು ಒಪ್ಪಲು ಸಾಧ್ಯವಿಲ್ಲ. ಇದು ಸಾಮಾನ್ಯವಾಗಿದೆ. ಎಲ್ಲರ ಅಭಿಪ್ರಾಯಗಳನ್ನು ಗೌರವಿಸಲಾಗುತ್ತದೆ. ಆದರೆ ಅಂತಹ ವಿನ್ಯಾಸಗಳನ್ನು ತಜ್ಞರು ತಯಾರಿಸುತ್ತಾರೆ ಎಂದು ನಾವು ನೆನಪಿನಲ್ಲಿಡಬೇಕು. ಅಶೋಕ ಸ್ತಂಭದ ವಿನ್ಯಾಸದ ಬಗ್ಗೆ ಏನೊಂದೂ ಅರಿವಿರದ ನನ್ನಂತ ಸಾಮಾನ್ಯ ವ್ಯಕ್ತಿ ಎಂದಿಗೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಸ್ಪಷ್ಟಪಡಿಸಿದರು.
ಅಶೋಕ ಸ್ತಂಭವು ದೇಶದಲ್ಲಿ ದೊಡ್ಡ ಚರ್ಚೆಯಾದ ನಂತರ ಶಿಲ್ಪಿ ಸುನೀಲ್ ದೇವರ್ ಪ್ರತಿಕ್ರಿಯೆ ನೀಡಿದ್ದಾರೆ. ಪೋಟೊ ತೆಗೆದ ಕ್ಯಾಮೆರಾದ ಕೋನದಲ್ಲಿನ ವ್ಯತ್ಯಾಸವೇ ಕಂಬದ ಮೇಲಿರುವ ಸಿಂಹದ ಮುಖ ವಿಭಿನ್ನವಾಗಿ ಕಾಣಲು ಕಾರಣವಾಗಿದೆ. ಚಿತ್ರವನ್ನು ಕೆಳಗಿನಿಂದ ಚಿತ್ರೀಕರಿಸಿದ ಕಾರಣ, ಮುಖದ ಅಭಿವ್ಯಕ್ತಿಗಳು ಕ್ರೂರತೆಯಿಂದ ಕೂಡಿ ಬಾಯಿ ದೊಡ್ಡದಾಗಿ ಕಾಣಿಸಿಕೊಂಡವು ಎಂದು ದೇವರ್ ಹೇಳಿರುವÀರು. ನೂತನ ಸಂಸತ್ ಭವನದ ಮೇಲೆ ನಿರ್ಮಿಸಿರುವ ಅಶೋಕ ಸ್ತಂಭದ ಮೇಲಿರುವ ಸಿಂಹಗಳು ಒರಟು ನೋಟ ಬೀರುತ್ತಿವೆ ಎಂಬ ಆರೋಪಗಳು ಕೇಳಿ ಬಂದಿರುವ ಸನ್ನಿವೇಶದಲ್ಲಿ ಅಶೋಕ ಸ್ತಂಭದ ಶಿಲ್ಪಿಯೊಬ್ಬರು ಬಂದು ವಿವರಣೆ ನೀಡಬೇಕಾಯಿತು.


