ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ವರೆಗೆ ಮಳೆ ಬಿರುಸು ಕಡಿಮೆಯಾಗಿದ್ದು, ಸಂಜೆ ವೇಳೆಗೆ ಮತ್ತೆ ಮಳೆಯಾಗತೊಡಗಿದೆ. ಹೊಳೆಯಲ್ಲಿ ನೆರೆಯ ಮಟ್ಟ ಇಳಿಯುತ್ತಿದ್ದಂತೆ ಮತ್ತೆ ಮಳೆಯಾಗುತ್ತಿರುವುದು ತಗ್ಗು ಪ್ರದೇಶದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೊಗ್ರಾಲ್‍ಪುತ್ತೂರಲ್ಲಿ ಆಲ್ಟೋ ಕಾರೊಂದು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದು, ಅದರಲ್ಲಿದ್ದ ಇಬ್ಬರನ್ನು ಪಾರುಮಾಡಲಾಗಿದೆ. ನೂರು ಮೀ. ದೂರಕ್ಕೆ ಸಾಗಿದ ಕಾರು ಬಯಲಲ್ಲಿ ಸಿಲುಕಿಕೊಂಡಿದ್ದು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿ ಕಾರನ್ನು ಮೇಲಕ್ಕೆತ್ತಿದ್ದಾರೆ.
ಬದಿಯಡ್ಕ-ಪುತ್ತೂರು ರಸ್ತೆಯ ಪಳ್ಳತ್ತಡ್ಕ ಸೇತುವೆ ಸನಿಹ ಹೆದ್ದಾರಿಯಲ್ಲಿ ಚರಂಡಿ ಅವ್ಯವಸ್ಥೆಯಿಂದ ಭಾರಿ ಪ್ರಮಾಣದಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಇಲ್ಲಿ ರಸ್ತೆ ಕುಸಿತಕ್ಕೀಡಾಗುವ ಭೀತಿ ಎದುರಾಗಿದೆ. ಒಂದು ಪಾಶ್ರ್ವದಲ್ಲಿ ಪೊಲೀಸರು ಅಪಾಯಸೂಚಕ ತಡೆಬೇಲಿಯನ್ನಿರಿಸಿ ಚಾಲಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಎರಡನೇ ಬಾರಿಗೆ ಭೂಮಿ ಕಂಪಿಸಿರುವ ವೆಳ್ಳರಿಕುಂಡಿನ ಪನತ್ತಡಿ ಪಂಚಾಯಿತಿಯ ಕಲ್ಲಪಳ್ಳಿಯಲ್ಲಿ ಜನರನ್ನು ಸರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಕೆಲವರನ್ನು ಅವರ ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ಹತ್ತಕ್ಕೂ ಹೆಚ್ಚು ಕುಟುಂಬಗಳನ್ನು ತೆರವುಗೊಳಿಸಲಾಗಿದೆ. ಈ ಪ್ರದೇಶದ ಜನತೆಗೆ ಜಾಗ್ರತಾ ನಿರ್ದೇಶ ನೀಡಲಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಶಾಲೆಗಳಿಗೆ ರಜೆ ಸಾರಲಾಗಿದೆ.





