ನವದೆಹಲಿ: ಮಧ್ಯ ಭಾರತದಲ್ಲಿ ಕಡಿಮೆ ಒತ್ತಡ ಸೃಷ್ಟಿಯಾಗಿರುವುದರಿಂದ ಕರ್ನಾಟಕದ ಕರಾವಳಿ ಸೇರಿ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಒಡಿಶಾ ರಾಜ್ಯಗಳಲ್ಲಿ ನೈರುತ್ಯ ಮುಂಗಾರು ಮಳೆ ಚುರುಕು ಪಡೆದಿದೆ. ಖಾರಿಫ್ ಬೆಳೆಗಳ ಬಿತ್ತನೆಯ ಸಮಯಕ್ಕೆ ಸಮೃದ್ಧ ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಹೇಳಿದೆ.
ಮಧ್ಯ ಭಾರತ ಮತ್ತು ಪಶ್ಚಿಮ ಕರಾವಳಿಯಲ್ಲಿ ಮುಂದಿನ ಐದು ದಿನಗಳವರೆಗೆ ಮುಂಗಾರು ಮಳೆಯು ಚುರುಕಾಗಿರಲಿದೆ. ಆದರೆ, ದೇಶದ ವಾಯವ್ಯ ಭಾಗಗಳಲ್ಲಿ ಬುಧವಾರದಿಂದ ಋತುವಿನಂತೆ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಕಚೇರಿ ಮಾಹಿತಿ ನೀಡಿದೆ.
ಮಧ್ಯ ಪ್ರದೇಶದ ಕೇಂದ್ರ ಭಾಗಗಳಲ್ಲಿ ಕಡಿಮೆ ಒತ್ತಡದ ಪರಿಣಾಮ ಗುಜರಾತ್‌ನಿಂದ ಮಹಾರಾಷ್ಟ್ರದ ತೀರದವರೆಗೆ ಚಂಡಮಾರುತ ಬೀಸಲಿದೆ. ಮುಂದಿನ ಐದು ದಿನಗಳವರೆಗೆ ಕರ್ನಾಟಕದ ಕರಾವಳಿ, ತೆಲಂಗಾಣ, ಕೇರಳ ಹಾಗೂ ಒಡಿಶಾದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.