ತಿರುವನಂತಪುರ: ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಪೋಲೀಸರು ರೂಪಿಸಿರುವ ವರ್ಚುವಲ್ ಕ್ಯೂ ವ್ಯವಸ್ಥೆಯನ್ನು ತಿರುವಾಂಕೂರು ದೇವಸ್ವಂ ಮಂಡಳಿಗೆ ಹಸ್ತಾಂತರಿಸಲು ಉನ್ನತ ಮಟ್ಟದ ನಿರ್ಧಾರ ಕೈಗೊಳ್ಳಲಾಗಿದೆ. ಹೈಕೋರ್ಟ್ ತೀರ್ಪಿನ ಪ್ರಕಾರ ಈ ತೀರ್ಮಾನಕ್ಕೆ ಬರಲಾಗಿದೆ. ವ್ಯವಸ್ಥೆಯನ್ನು ನಿಯಂತ್ರಿಸಲು ಮತ್ತು ಯಾತ್ರಾರ್ಥಿಗಳನ್ನು ಪರೀಕ್ಷಿಸಲು ಪೋಲೀಸರು ಸಹಾಯ ಮಾಡುವುದನ್ನು ಮುಂದುವರಿಸುತ್ತಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ದೇವಸ್ವಂ ಮಂಡಳಿಯು ವರ್ಚುವಲ್ ಕ್ಯೂಗಾಗಿ ವಿಶೇಷ ವ್ಯವಸ್ಥೆಯನ್ನು ಸಿದ್ಧಪಡಿಸಲಿದೆ. ಐಟಿ ಇಲಾಖೆಯನ್ನು ಬಲಪಡಿಸಲಾಗುವುದು. ಸಂಬಂಧಪಟ್ಟವರಿಗೆ ಅಗತ್ಯ ತರಬೇತಿ ನೀಡಲಾಗುವುದು. ಅಗತ್ಯವಿದ್ದರೆ ತಾತ್ಕಾಲಿಕ ತಾಂತ್ರಿಕ ನೆರವು ಸಹ ನೀಡಲಾಗುವುದು. ವರ್ಚುವಲ್ ಕ್ಯೂ ವ್ಯವಸ್ಥೆಯಲ್ಲಿ ಪೋಲೀಸರ ನಿಯಂತ್ರಣದ ಬಗ್ಗೆ ಹೈಕೋರ್ಟ್ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು.
ಪಂಪಾ ಮತ್ತು ನಿಲಕ್ಕಲ್ ನಲ್ಲಿ ಶಾಶ್ವತ ತಪಾಸಣಾ ಕೇಂದ್ರ ಮತ್ತು ಸ್ಪಾಟ್ ಬುಕಿಂಗ್ ಕೇಂದ್ರ ಮುಂದುವರಿಯಲಿದೆ. ಇನ್ನು ಮುಂದೆ ಹಬ್ಬ ಹರಿದಿನಗಳಲ್ಲಿ 11 ಕೇಂದ್ರಗಳಲ್ಲಿ ಪೋಲೀಸರು ಅಳವಡಿಸಿರುವ ಸ್ಪಾಟ್ ಬುಕ್ಕಿಂಗ್ ಕೇಂದ್ರಗಳನ್ನು ದೇವಸ್ವಂ ಮಂಡಳಿ ತನ್ನ ಸುಪರ್ಧಿಗೆ ತೆಗೆದುಕೊಳ್ಳಲಿದೆ. ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗೆ ಪೋಲೀಸರ ನೆರವು ಇರುತ್ತದೆ.
ಶಬರಿಮಲೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಬೆದರಿಕೆಯ ಸಂದರ್ಭದಲ್ಲಿ ಪೋಲೀಸ್ ನಿಯಂತ್ರಣವು ಪ್ರತಿಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಸಭೆ ನಿರ್ಣಯಿಸಿತು.
ದೇವಸ್ವಂ ಸಚಿವ ಕೆ ರಾಧಾಕೃಷ್ಣನ್, ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ನ್ಯಾಯವಾದಿ ಕೆ.ಅನಂತ ಗೋಪನ್, ಮುಖ್ಯ ಕಾರ್ಯದರ್ಶಿ ಡಾ. ವಿ.ಪಿ.ಜಾಯ್ ಮತ್ತಿತರರು ಭಾಗವಹಿಸಿದ್ದರು.





