ಮುಳ್ಳೇರಿಯ: ಆದೂರು ಶಾಲೆಯಲ್ಲಿ ಫಿಸಿಕಲ್ ಸಯನ್ಸ್ ಪಠ್ಯ ಬೋಧನೆಗೆ ಕನ್ನಡೇತರ ಅಧ್ಯಾಪಕ ನೇಮಕಗೊಂಡಿರುವುದರಿಂದ ಕನ್ನಡ ಮಾಧ್ಯಮ ಮಕ್ಕಳಿಗೆ ಪಾಠಭಾಗವನ್ನು ಅರ್ಥೈಸಲು ಕಷ್ಟವಾಗುತ್ತಿದೆಯೆಂದು, ಅಧ್ಯಾಪಕನನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಗುರುವಾರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಲೆಕ್ಟರೇಟ್ ಧರಣಿ ಸತ್ಯಾಗ್ರಹ ಕೈಗೊಂಡರು.
ಪ್ರಸಕ್ತ ಸಾಲಿನ ಕಾಲುವಾರ್ಷಿಕ ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಕನ್ನಡದ ಮಕ್ಕಳಿಗೆ ಆಗುವ ಈ ಅನ್ಯಾಯವನ್ನು ಸಂಬಂಧಪಟ್ಟ ಮೇಲಧಿಕಾರಿಗಳು ಸರಿಪಡಿಸಬೇಕೆಂದು ರಕ್ಷಕರು ಅಧಿಕೃತರನ್ನು ಈ ಸಂದರ್ಭ ಒತ್ತಾಯಿಸಿದರು. ಶಾಲಾ ವಿದ್ಯಾರ್ಥಿಗಳು ಹಾಗೂ ಹೆತ್ತವರು ಕಲೆಕ್ಟರ್ ಹಾಗೂ ಡಿ.ಡಿ ಇ ಅವರನ್ನು ಭೇಟಿಯಾಗಿ ತಮಗಾದ ಅನ್ಯಾಯವನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ಮನವಿ ನೀಡಿದರು.



