ಬದಿಯಡ್ಕ: 'ಮಕ್ಕಳಲ್ಲಿ ಭಾಷೆಯ ಕುರಿತಾದ ಆಸಕ್ತಿ ಹಾಗೂ ಅಕರ್ಷಣೆ ಹೆಚ್ಚಿಸಲು, ಸಾಹಿತ್ಯ ಕಮ್ಮಟಗಳು ಅಥವಾ ಶಿಬಿರಗಳು ಶಾಲೆಗಳಲ್ಲಿ ನಿರಂತರವಾಗಿ ನಡೆಯಬೇಕು. ಭಾಷೆಯ ಕುರಿತಾದ ಸ್ವಾಭಿಮಾನ ಮತ್ತು ಪ್ರೀತಿ ಅರಳಿದಾಗ ಮಾತ್ರ ಮಕ್ಕಳಲ್ಲಿ ಭಾಷಾ ಜಾಗೃತಿಯ ಮನಸ್ಸು ಮೂಡುತ್ತದೆ' ಎಂದು ಚುಟುಕು ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಹೇಳಿದರು.
ಅವರು ಬುಧವಾರ ಅಗಲ್ಪಾಡಿಯ ಅನ್ನಪೂರ್ಣೇಶ್ವರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
'ಎಳೆಯ ಮಕ್ಕಳಿಗೆ ಕಲಿಸುವುದು ಸುಲಭ. ಕುತೂಹಲ ಮತ್ತು ಆಸಕ್ತಿ ಅವರಲ್ಲಿ ಇರುತ್ತದೆ. ಶಾಲಾ ಸಂಘಟನೆಗಳು ಉದ್ಘಾಟನೆಯಾದ ಮೇಲೆ ನಡೆಸುವ ಚಟುವಟಿಕೆಗಳ ಮೇಲೆ, ಯೋಜನೆಯ ಯಶಸ್ಸು ನಿಂತಿದೆ. ಕಾಸರಗೋಡು ಜಿಲ್ಲೆಯಲ್ಲಿ ಸಾಹಿತ್ಯ, ಗಾಯನ, ಗಮಕ, ಚಿತ್ರಕಲೆ ಮೊದಲಾದ ಅನೇಕ ವಿಚಾರಗಳಿಗೆ ಉತ್ತಮ ಸಂಪನ್ಮೂಲ ವ್ಯಕ್ತಿಗಳಿದ್ದಾರೆ. ಅವರನ್ನು ಬಳಸಿಕೊಂಡು ಪ್ರತೀ ಶಾಲೆಯಲ್ಲಿ ನಿರ್ಧಿಷ್ಠ ಅವಧಿಯಲ್ಲಿ ಪ್ರತೀ ತಿಂಗಳೂ ಸಾಹಿತ್ಯದ ಕಮ್ಮಟಗಳು ನಡೆಸಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಹಾಗೂ ರಕ್ಷಕ-ಶಿಕ್ಷಕ ಸಂಘಗಳು ಆಸಕ್ತಿ ವಹಿಸಬೇಕು. ಇದರಿಂದ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಭಾಷಾ ಜಾಗೃತಿ ಮೂಡುತ್ತದೆ' ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರವಿಕಾಂತ ಕೇಸರಿ ಕಡಾರು ವಹಿಸಿದ್ದರು. ವಿಶ್ರಾಂತ ಪ್ರಾಂಶುಪಾಲ ಡಾ. ಬೇ. ಸಿ ಗೋಪಾಲಕೃಷ್ಣ ಭಟ್ ಅವರು ಸಭೆಯಲ್ಲೇ ಅಶುಕವನ ಹಾಗೂ ಅಶುಕತೆಗಳನ್ನು ರಚಿಸಿ ಮಕ್ಕಳನ್ನು ರಂಜಿಸಿದರು. ಸಾಹಿತಿ ಸುಂದರ ಬಾರಡ್ಕ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಭಟ್ ಗೋಸಾಡ ಸ್ವಾಗತಿಸಿದರು. ಶಿಕ್ಷಕಿ ನೇತ್ರಾವತಿ ವಂದಿಸಿದರು. ಶಿಕ್ಷಕಿ ಸೌಮ್ಯ ಕುಮಾರಿ ನಿರೂಪಿಸಿದರು. ನಂತರ ವ್ಯಂಗ್ಯಚಿತ್ರಗಾರ ವಿರಾಜ್ ಅಡೂರು ಅವರು ಮಕ್ಕಳಿಗೆ ವ್ಯಂಗ್ಯಚಿತ್ರ ರಚನೆಯ ಬಗ್ಗೆ ತರಬೇತಿ ನೀಡಿದರು. ಸುಮಾರು 60 ಮಂದಿ ಮಕ್ಕಳು ಕಮ್ಮಟದಲ್ಲಿ ಭಾಗವಹಿಸಿದ್ದರು.

.jpg)
.jpg)
