ಕಾಸರಗೋಡು: ಬೀದಿ ನಾಯಿಗಳ ಸಂತಾನಾಭಿವೃದ್ಧಿ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಶ್ವಾನಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ವಿಶೇಷ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಅಕ್ಟೋಬರ್ 2016 ರಿಂದ ಮೇ 2022 ರವರೆಗೆ ನಡೆಸಲಾದ ಎಬಿಸಿ (ಪ್ರಾಣಿ ಜನನ ನಿಯಂತ್ರಣ) ಯೋಜನೆಯ ಮುಂದುವರಿದ ಭಾಗವಾಗಿ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ 11247 ಬೀದಿ ನಾಯಿಗಳನ್ನು ಸೆರೆಹಿಡಿಯಲಾಗಿದ್ದು, ಹುಚ್ಚುನಾಯಿರೋಗ ತಡೆ ಚುಚ್ಚುಮದ್ದು ನೀಡಲಾಗಿದೆ. ಎಬಿಸಿ ಯೋಜನೆಗಾಗಿ ಗೊತ್ತುಪಡಿಸಿದ ಏಜೆನ್ಸಿಯು ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ತನ್ನ ನೋಂದಣಿಯನ್ನು ನವೀಕರಿಸಿದ ತಕ್ಷಣ ಎಬಿಸಿ ಕಾರ್ಯಾಚರಣೆಯನ್ನು ಈ ಹಿಂದಿನಂತೆ ನಡೆಸಲಾಗುವುದು ಎಂದು ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮಾಹಿತಿ ನೀಡಿದರು.
ಅತಿರೇಕದಿಂದ ವರ್ತಿಸುವ ಬೀದಿನಾಯಿಗಳಿಗೆ ಲಸಿಕೆ ಹಾಕಲು ಮೊದಲ ಆದ್ಯತೆ ನೀಡಲಾಗುತ್ತದೆ. ಸೆ.26ರಿಂದ ಅಕ್ಟೋಬರ್ 25ರವರೆಗೆ ಒಂದು ತಿಂಗಳ ಅವಧಿಗೆ ಜಿಲ್ಲೆಯ ಎಲ್ಲ ಸಾಕು ನಾಯಿಗಳಿಗೆ ಲಸಿಕೆ ಹಾಕಿಸಿ ಪರವಾನಗಿ ನೀಡಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳ ಮೇಲ್ನೋಟದಲ್ಲಿ ಮುನ್ನೆಚ್ಚರಿಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಶು ಕಲ್ಯಾಣಾಧಿಕಾರಿ ತಿಳಿಸಿದರು. ಸೆ. 19ರಂದು ಬೆಳಗ್ಗೆ ಜಿಲ್ಲೆಯ ಶಾಸಕರು, ತಾ.ಪಂ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರ ಸಭೆ ಆಯೋಜಿಸಲಾಗಿದೆ. 20ರಂದು ಶ್ವಾನ ಪ್ರೇಮಿಗಳು, ಒಕ್ಕಲಿಗರ ಸಂಘ, ಕುಟುಂಬಶ್ರೀ ಸದಸ್ಯರ ಸಭೆಯನ್ನೂ ಕರೆಯಲಾಗಿದೆ. 23ರಂದು ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಕ್ರಿಯಾಯೋಜನೆ ರೂಪಿಸಲು ತೀರ್ಮಾಣಿಸಲಾಯಿತು. ಅಕ್ಟೋಬರ್ 26 ರಿಂದ30ರವರೆಗೆ ಬೀದಿ ನಾಯಿಗಳಿಗೂ ಲಸಿಕೆ ಹಾಕಲಾಗುವುದು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್, ಸಹಾಯಕ ಜಿಲ್ಲಾಧಿಕಾರಿ ಮಿಥುನ್ ಪ್ರೇಮರಾಜ್ ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲೆಯಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗುತ್ತಿರುವ ಬಗ್ಗೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು.
ಬೀದಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಕ್ರಿಯೆಗೆ ವಿಶೇಷ ಕ್ರಿಯಾ ಯೋಜನೆ-ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ತೀರ್ಮಾನ
0
ಸೆಪ್ಟೆಂಬರ್ 16, 2022
Tags





