ನವದೆಹಲಿ: ರಷ್ಯಾ ಹಾಗೂ ಭಾರತದ ರಕ್ಷಣಾ ಮಂತ್ರಿಗಳಾದ ಸೆರ್ಗೆಯ್ ಶೊಯಿಗು ಮತ್ತು ರಾಜನಾಥ್ ಸಿಂಗ್ ನಡುವೆ ಇಂದು (ಅ.26) ಟೆಲಿಫೋನ್ ಸಂವಾದ ನಡೆಯಿತು. ಈ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಡರ್ಟಿ ಬಾಂಬ್ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದರು.
ರಷ್ಯಾ ಮಂತ್ರಿಯೊಂದಿಗೆ ಮಾತನಾಡುವಾಗ 'ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಮಾನವೀಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಹೀಗಾಗಿ ಅಣು ಬಾಂಬಿನ ಆಯ್ಕೆಯನ್ನು ಬಿಟ್ಟು ಬಿಡಬೇಕು' ಎಂದು ರಾಜನಾಥ್ ಸಿಂಗ್ ಸೂಚಿಸಿದರು.
ಟೆಲಿಫೋನ್ ಸಂವಾದದಲ್ಲಿ ಇಬ್ಬರೂ ರಕ್ಷಣಾ ಮಂತ್ರಿಗಳು ಯುಕ್ರೇನ್ನ ಸ್ಥಿತಿಯ ಬಗ್ಗೆ ಮಾತನಾಡಿದರು. 'ಯುಕ್ರೇನ್ ಡರ್ಟಿ ಬಾಂಬ್ ಬಳಸಲು ಪ್ರಚೋದಿಸುತ್ತಿದೆ' ಎಂದು ಸೆರ್ಗೇಯಿ ಹೇಳಿರುವ ಬಗ್ಗೆ ಭಾರತದಲ್ಲಿನ ರಷ್ಯಾ ರಾಯಭಾರ ಕಛೇರಿ ಟ್ವೀಟ್ ಮಾಡಿದೆ.
ಡರ್ಟಿ ಬಾಂಬ್ ಎಂದರೇನು?
'ಡರ್ಟಿ
ಬಾಂಬ್' ಎಂಬುದು ಸ್ಫೋಟದಲ್ಲಿ ವಿಕಿರಣಶೀಲ, ಜೈವಿಕ ಅಥವಾ ರಾಸಾಯನಿಕ ವಸ್ತುಗಳನ್ನು
ಹರಡುವ ಸಾಂಪ್ರದಾಯಿಕ ಬಾಂಬ್ ಆಗಿದೆ. ಈ ಬಾಂಬು ಸ್ಫೋಟಗೊಂಡ ಸ್ಥಳದಲ್ಲಿ ಅಣು ಬಾಂಬು
ಹರಡುವ ರೀತಿಯಲ್ಲೇ ವಿಕಿರಣವನ್ನು ಹರಡುತ್ತದೆ. ಇನ್ನೂ ಕೆಲವು ಪ್ರಸಂಗಗಳಲ್ಲಿ ವೈರಸ್
ಅಥವಾ ಇತರೆ ಬೆಳೆ/ಆರೋಗ್ಯ ನಾಶ ಮಾಡುವ ರಾಸಾಯನಿಕ ವಸ್ತುಗಳನ್ನು ಹರಡುತ್ತದೆ. ಇದರಿಂದ
ಸ್ಫೋಟವಾದ ಮೈಲುಗಟ್ಟಲೆ ವಿಸ್ತೀರ್ಣದ ಪ್ರದೇಶದಲ್ಲಿ ಅನೇಕ ವರ್ಷಗಳ ಕಾಲ ಯಾವುದೇ
ಬೆಳೆಯನ್ನು ಬೆಳೆಯುವುದು ಸಾಧ್ಯವಿಲ್ಲ. ಜೊತೆಗೆ ಆ ಭೂಮಿ ವಾಸಯೋಗ್ಯವೂ ಆಗಿರುವುದಿಲ್ಲ.






