HEALTH TIPS

ಮತ್ತೆ ಬೀದಿಗಿಳಿದ ಸೇಬು ಬೆಳೆಗಾರರು

 

                  ಕೋಟಖಾಯಿ/ಠಿಯೋಗ್/ಫಾಗು: 1990ರಲ್ಲಿ ಸೇಬು ಬೆಳೆಗಾರರ ಬೃಹತ್ ಪ್ರತಿಭಟನೆಗೆ ಹಿಮಾಚಲ ಪ್ರದೇಶ ಸಾಕ್ಷಿಯಾಗಿತ್ತು. ಸೇಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂಬುದು ಅಂದು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿ ಸರ್ಕಾರದ ಮುಂದಿದ್ದ ಪ್ರಮುಖ ಬೇಡಿಕೆಯಾಗಿತ್ತು.

ಅದೇ ವರ್ಷದ ಜುಲೈ 22ರಂದು ಕೋಟಗಢ ಎಂಬಲ್ಲಿ ಸೇರಿದ್ದ ನೂರಾರು ಪ್ರತಿಭಟನಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಮೂವರು ರೈತರು ಗುಂಡಿಗೆ ಬಲಿಯಾಗಿದ್ದರು.

                     ಸೇಬು ಬೆಳಗಾರರ ಪ್ರತಿಭಟನೆಯು ರಾಜ್ಯದ ರಾಜಕೀಯ ದಿಕ್ಕನ್ನು ಬದಲಿಸಿತ್ತು. ಕಾಂಗ್ರೆಸ್ ನಾಯಕ ವೀರಭದ್ರ ಸಿಂಗ್ ಅವರು 68 ಸದಸ್ಯಬಲದ ವಿಧಾನಸಭೆಯಲ್ಲಿ 60 ಸೀಟುಗಳನ್ನು ಗೆದ್ದು ಅಧಿಕಾರ ಹಿಡಿದರು. ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸಲು ಮಂಡಿ ಮೂಲಕ ಖರೀದಿ ಯೋಜನೆಯನ್ನು (ಎಂಐಎಸ್) ಸರ್ಕಾರ ಪರಿಚಯಿಸಿತು. ಇದಾದ 30 ವರ್ಷಗಳ ಬಳಿಕ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೇಬು ಬೆಳೆಗಾರರು ಮತ್ತೆ ಬೀದಿಗಿಳಿದಿದ್ದಾರೆ. ಈ ಸಮಯದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಿಗದಿಯಾಗಿದೆ. ಹಿಮಾಚಲ ಪ್ರದೇಶ ರಾಜಕಾರಣದಲ್ಲಿ ಸೇಬು ಬೆಳೆಗಾರರ ಪ್ರದೇಶ ಮಹತ್ವದ್ದಾಗಿದ್ದು,20ರಿಂದ 25 ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಿಸಿದೆ. ಶಿಮ್ಲಾ ಜಿಲ್ಲೆಯ ಎಂಟು, ಮಂಡಿ, ಕುಲ್ಲು ಮತ್ತು ಚಂಬಾ ಜಿಲ್ಲೆಯ ತಲಾ ನಾಲ್ಕು ಕ್ಷೇತ್ರಗಳು ಈ ವ್ಯಾಪ್ತಿಯಲ್ಲಿವೆ.

                    ಸೇಬು ಪೆಟ್ಟಿಗೆಯ ಮೇಲೆ ವಿಧಿಸಲಾಗುತ್ತಿರುವ ಶೇ 18ರಷ್ಟು ಜಿಎಸ್‌ಟಿಯನ್ನು ಶೇ 12ಕ್ಕೆ ಇಳಿಸುವುದು ಬೆಳೆಗಾರರ ಪ್ರಮುಖ ಬೇಡಿಕೆಗಳಲ್ಲೊಂದು. ಎಂಐಎಸ್ ಯೋಜನೆಯಡಿ ಖರೀದಿಸಿದ ದಾಸ್ತಾನಿನ ಪಾವತಿ ಬಾಕಿ ಉಳಿದಿರುವುದು ಬೆಳೆಗಾರರನ್ನು ಕೆರಳಿಸಿದೆ. ಕೀಟನಾಶಕ, ಶಿಲೀಂಧ್ರನಾಶಕಗಳ ಸಬ್ಸಿಡಿಯನ್ನು ಸರ್ಕಾರ ತೆಗೆದುಹಾಕಿದೆ ಎಂದು ರೈತರು ಆರೋಪಿಸುತ್ತಾರೆ.

                  ಸೇಬು ಬೆಳೆಗಾರರ ಪ್ರತಿಭಟನೆಯ ನಡುವೆಯೇ ರಾಜಕೀಯ ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿವೆ. ವಿರೋಧ ಪಕ್ಷಗಳಿಂದಾಗಿ ಸೇಬು ಬೆಳೆಗಾರರ ವಿಷಯವು ರಾಜಕೀಯ ರೂಪ ತಾಳಿದೆ ಎಂದು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಆರೋಪಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮೃತಪಟ್ಟ ಸೇಬು ಬೆಳೆಗಾರರ ಸ್ಮರಣೆಗಾಗಿ ಜುಲೈ 22 ಅನ್ನು ಹುತಾತ್ಮರ ದಿನವನ್ನಾಗಿ ಘೋಷಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷ ಪ್ರಕಟಿಸಿದೆ. ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್, ರಾಜ್ಯ ಸರ್ಕಾರವು ಚುನಾವಣೆಗೆ ಎರಡು ತಿಂಗಳ ಮೊದಲಷ್ಟೇ ಬೆಲೆ ನಿಗದಿಗೆ ತಜ್ಞರ ಸಮಿತಿ ರಚಿಸಿದೆ ಎಂದಿದೆ. ಬಹುತೇಕ ಸೇಬು ಬೆಳೆಗಾರರು ಅನಕ್ಷರಸ್ಥರಾಗಿದ್ದು, ಜಿಎಸ್‌ಟಿ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಿಪಿಎಂ ಅಭ್ಯರ್ಥಿ ವಿಶಾಲ್ ಸಂಗ್ತಾ ಹೇಳುತ್ತಾರೆ.

                 ಮಂಡಿಯಿಂದ ಖರೀದಿ ಯೋಜನೆಯಡಿ 2013ರಿಂದ ಬಾಕಿಯಿದ್ದ ಹಣವನ್ನು ಪಾವತಿ ಮಾಡಲಾಗಿದ್ದು, ಕೆ.ಜಿ.ಗೆ ₹7 ಇದ್ದ ಬೆಂಬಲ ಬೆಲೆಯನ್ನು ₹10.5ಕ್ಕೆ ಹೆಚ್ಚಿಸಲಾಗಿದೆ ಎಂದು ಎಪಿಎಂಸಿ ಮುಖ್ಯಸ್ಥ ನರೇಶ್ ಚೌಹಾಣ್ ಹೇಳುತ್ತಾರೆ. ಬೆಲೆ ನಿಗದಿ ಮಾಡುವ ಸಂಬಂಧ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿತ್ತು. ಪ್ರತಿ ಋತುವಿನಲ್ಲೂ ತಜ್ಞರ ತಂಡವು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದು ಅವರು ಹೇಳಿದ್ದಾರೆ.

                  ಸುಮಾರು ₹5 ಸಾವಿರ ಕೋಟಿ ಮೌಲ್ಯದ ಸೇಬು ಮಾರುಕಟ್ಟೆಯು ರಾಜ್ಯದ ಆರ್ಥಿಕತೆಯಲ್ಲಿ ಶೇ 13.5ರಷ್ಟು ಪಾಲು ಹೊಂದಿದೆ. ಪ್ರತೀ ಸೇಬು ಪೆಟ್ಟಿಗೆಗಳು ₹1500ರಿಂದ ₹2000ಕ್ಕೆ ಮಾರಾಟವಾಗುತ್ತಿವೆ. ಈ ವರ್ಷ 3.5 ಕೋಟಿ ಪೆಟ್ಟಿಗೆಯಷ್ಟು ಸೇಬು
ಉತ್ಪಾದನೆಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries