ನವದೆಹಲಿ : ಜಗತ್ತಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಎರಡು ಕೋಟಿ ಕೋವಿಶೀಲ್ಡ್ ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ ಉಚಿತವಾಗಿ ನೀಡಲು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮುಂದಾಗಿದೆ ಎಂದು ಸರ್ಕಾರಿ ಮೂಲಗಳು ಬುಧವಾರ ತಿಳಿಸಿವೆ.
₹410 ಕೋಟಿ ಮೌಲ್ಯದ ಎರಡು ಕೋಟಿ ಲಸಿಕೆ ನೀಡುವ ಸಂಬಂಧ ಸೀರಂನ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಯಾವ ರೀತಿಯಲ್ಲಿ ಲಸಿಕೆಯನ್ನು ತಲುಪಿಸಬೇಕು ಎಂದೂ ಸಿಂಗ್ ಅವರು ಸರ್ಕಾರವನ್ನು ಕೇಳಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಕ್ಕಾಗಿ ಸೀರಂ ಕಂಪನಿಯು ಕೇಂದ್ರ ಸರ್ಕಾರಕ್ಕೆ ಇಲ್ಲಿಯವರೆಗೂ 170 ಕೋಟಿಗೂ ಹೆಚ್ಚಿನ ಪ್ರಮಾಣದ ಲಸಿಕೆಯನ್ನು ನೀಡಿದೆ.




