HEALTH TIPS

ಭಾರತ್ ಜೋಡೊ ಯಾತ್ರೆ: ರಾಹುಲ್ ಭದ್ರತೆಯಲ್ಲಿ ಲೋಪ

 

             ನವದೆಹಲಿ: 'ಭಾರತ್‌ ಜೋಡೊ ಯಾತ್ರೆಯು ದೆಹಲಿಯಲ್ಲಿ ಸಾಗುವಾಗ ರಾಹುಲ್ ಗಾಂಧಿ ಅವರ ಭದ್ರತೆಯಲ್ಲಿ ಹಲವು ಬಾರಿ ಲೋಪವಾಗಿದೆ. ರಾಹುಲ್ ಅವರಿಗೆ ಭದ್ರತೆ ಒದಗಿಸುವಲ್ಲಿ ದೆಹಲಿ ಪೊಲೀಸರು ವಿಫಲವಾಗಿದ್ದಾರೆ' ಎಂದು ಕಾಂಗ್ರೆಸ್‌ ಆರೋಪಿಸಿದೆ.

             ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಪತ್ರ ಬರೆದಿದ್ದಾರೆ. ಅಗತ್ಯ ಭದ್ರತೆಯನ್ನು ಒದಗಿಸಿ ಎಂದು ಶಾ ಅವರನ್ನು ವೇಣುಗೋಪಾಲ್‌ ಆಗ್ರಹಿಸಿದ್ದಾರೆ.

                     ದೆಹಲಿ ಪೊಲೀಸ್‌ ಇಲಾಖೆಯು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಕಾಂಗ್ರೆಸ್‌, ಅಮಿತ್ ಶಾ ಅವರಿಗೆ ಪತ್ರ ಬರೆದಿದೆ. ಯಾತ್ರೆ ಸಾಗಿ ಹೋಗಲಿರುವ ಇತರ ರಾಜ್ಯಗಳಲ್ಲೂ ಭದ್ರತೆ ಖಚಿತಪಡಿಸುವಂತೆ ಕಾಂಗ್ರೆಸ್‌ ಆಗ್ರಹಿಸಿದೆ.

                 ರಾಹುಲ್ ಗಾಂಧಿ ಅವರಿಗೆ ಝಡ್‌ಪ್ಲಸ್‌ ಶ್ರೇಣಿಯ ಭದ್ರತೆ ಇದೆ. ದೇಶದುದ್ದಕ್ಕೂ ಸಾಗಿಬಂದಿರುವ ಭಾರತ್ ಜೋಡೊ ಯಾತ್ರೆಯ ವೇಳೆ ಅವರ ಸುತ್ತ ಭದ್ರತಾ ಸಿಬ್ಬಂದಿಯ ಪರಿಧಿ ಇರುತ್ತಿತ್ತು. ಪರಿಶೀಲನೆಯ ನಂತರವೇ ರಾಹುಲ್ ಅವರ ಬಳಿಗೆ ಸಾರ್ವಜನಿಕರನ್ನು ಬಿಡಲಾಗುತ್ತಿತ್ತು. ಆದರೆ, ದೆಹಲಿಯಲ್ಲಿ ರಾಹುಲ್ ಅವರ ಸುತ್ತ ಈ ರೀತಿಯ ಭದ್ರತಾ ಪರಿಧಿ ಇಲ್ಲದಿರುವ ವಿಡಿಯೊವನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

             ಜನರು ರಾಹುಲ್ ಅವರ ಸುತ್ತ ಕಿಕ್ಕಿರಿದು ಸುತ್ತುವರಿದಿರುವ, ಜನರನ್ನು ನಿಯಂತ್ರಿಸಲು ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಯಾತ್ರಾರ್ಥಿಗಳು ಹರಸಾಹಸ ಪಡುತ್ತಿರುವ ದೃಶ್ಯಗಳು ಈ ವಿಡಿಯೊದಲ್ಲಿ ಇವೆ.

                     ಈ ಬಗ್ಗೆ ವೇಣುಗೋಪಾಲ್ ಅವರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. 'ಯಾತ್ರೆಯು ದೆಹಲಿಯನ್ನು ಪ್ರವೇಶಿಸಿದ ನಂತರ ಇಂತಹ ಸಮಸ್ಯೆ ತಲೆದೋರಿದೆ. ಡಿಸೆಂಬರ್ 24ರ ಯಾತ್ರೆಯ ವೇಳೆ ಹಲವು ಬಾರಿ ಭದ್ರತಾ ಲೋಪವಾಗಿದೆ. ದೆಹಲಿ ‍ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದೆ ನಿಂತಿದ್ದರು. ರಾಹುಲ್ ಅವರಿಗೆ ಭದ್ರತೆ ನೀಡುವಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ' ಎಂದು ಅವರು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.

                  'ದೇಶದ ಏಕತೆಗಾಗಿ ಕಾಂಗ್ರೆಸ್‌ ಪಕ್ಷವು ಈಗಾಗಲೇ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಸೇರಿ ಇಬ್ಬರು ಪ್ರಧಾನಿಗಳನ್ನು ಕಳೆದುಕೊಂಡಿದೆ. 2013ರಲ್ಲಿ ಛತ್ತೀಸಗಡ ಕಾಂಗ್ರೆಸ್‌ನ ಎಲ್ಲಾ ನಾಯಕರೂ ನಕ್ಸಲರ ದಾಳಿಗೆ ಬಲಿಯಾಗಿದ್ದರು. ಭಾರತ್ ಜೋಡೊ ಯಾತ್ರೆಯು ಸೂಕ್ಷ್ಮ ರಾಜ್ಯಗಳಾದ ಹರಿಯಾಣ ಮತ್ತು ಪಂಜಾಬ್‌ ಅನ್ನು ಪ್ರವೇಶಿಸಲಿದೆ. ಅಲ್ಲಿ ರಾಹುಲ್ ಗಾಂಧಿ ಮತ್ತು ಇತರ ಯಾತ್ರಿಗಳಿಗೆ ಅಗತ್ಯ ಭದ್ರತೆ ಒದಗಿಸಿ' ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

                                          ಯಾತ್ರಿಗಳಿಗೆ ಕಿರುಕುಳ: ವೇಣುಗೋಪಾಲ್

                 ಭಾರತ್ ಜೋಡೊ ಯಾತ್ರೆಯಲ್ಲಿ ಭಾಗಿಯಾದವರನ್ನು ಹರಿಯಾಣ ಗುಪ್ತಚರ ಇಲಾಖೆಯ ಕೆಲವು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಯಾತ್ರಿಗಳಿಗೆ ಕಿರುಕುಳ ನೀಡುವ ಮೂಲಕ ಗಣ್ಯ ವ್ಯಕ್ತಿಗಳು ಯಾತ್ರೆಯಲ್ಲಿ ಭಾಗಿಯಾಗುವುದನ್ನು ತಡೆಯಲು ಹೀಗೆ ಮಾಡಲಾಗುತ್ತಿದೆ' ಎಂದು ಕಾಂಗ್ರೆಸ್‌ ಆರೋಪಿಸಿದೆ. ಶಾ ಅವರಿಗೆ ವೇಣುಗೋಪಾಲ್ ಅವರು ಬರೆದಿರುವ ಪತ್ರದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.

                    'ಹರಿಯಾಣದ ಸೊಹ್ನಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿ. 23ರಂದು ಭಾರತ್ ಜೋಡೊ ಯಾತ್ರಿ ಗಳು ತಂಗಿದ್ದರು. ಈ ವೇಳೆಯಾತ್ರಿಗಳಿದ್ದ ಕಂಟೇನರ್‌ಗಳಿಗೆ, ರಾಜ್ಯ ಗುಪ್ತಚರ ಇಲಾಖೆಯ ಹಲವು ಅಧಿಕಾರಿಗಳು ಅಕ್ರಮವಾಗಿ ನುಗ್ಗಿ ವಿಚಾರಣೆ ನಡೆಸಿದ್ದಾರೆ. ದೇಶದ ಪ್ರತಿ ಪ್ರಜೆಯೂ, ದೇಶದ ಎಲ್ಲಾ ಜಾಗದಲ್ಲಿ ಮುಕ್ತವಾಗಿ ಓಡಾಡಲು ಸಂವಿಧಾನದ 19ನೇ ವಿಧಿಯು ಅವಕಾಶ ನೀಡಿದೆ. ದೇಶದಲ್ಲಿ ಶಾಂತಿ ಮತ್ತು ಸಹಬಾಳ್ವೆ ಸಾರಲು ಈ ಪಾದಯಾತ್ರೆ ನಡೆಸಲಾಗುತ್ತಿದೆ. ಸರ್ಕಾರ ಇದರಲ್ಲಿ ರಾಜಕಾರಣ ಮಾಡಬಾರದು' ಎಂದು ಆಗ್ರಹಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries