ಕುಂಬಳೆ: ಮಹಾಮಂಡಲದಲ್ಲೇ ಗುಂಪೆ ವಲಯದಲ್ಲಿ ನಡೆದ ವಲಯೋತ್ಸವವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಚೊಕ್ಕವಾಗಿ ಮೂಡಿಬಂದಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಮಹಾಮಂಡಲದಿಂದ ಬಂದಂತಹ ಪ್ರತಿಯೊಂದು ನಿರ್ದೇಶನವನ್ನು ಚಾಚೂ ತಪ್ಪದೆ ಅನುಸರಿಸುವಲ್ಲಿ ಗುಂಪೆ ವಲಯ ಮುಂಚೂಣಿಯಲ್ಲಿದೆ. ಶ್ರೀಮಠದ ಬಹಳಷ್ಟು ಕಾರ್ಯಗಳು ನಮ್ಮ ಮುಂದೆ ಇದೆ. ನಮ್ಮ ಸಮಾಜದ ಪ್ರತಿ ಮನೆಯವರಿಗೂ ಪರಸ್ಪರ ಸಂಪರ್ಕ ಇರಬೇಕು. ಶಿಷ್ಯಬಂಧುಗಳು ಶ್ರೀಮಠ ಮತ್ತು ಸಮಾಜಕ್ಕೆ ಸೇತುವೆಯಂತೆ ತೊಡಗಿಸಿಕೊಂಡು ಇನ್ನಷ್ಟು ಸಮರ್ಪಣಾ ಭಾವದಿಂದ ಸೇವೆಗೆ ಮುಂದಾಗಬೇಕು. ಪ್ರತಿಭಾ ಪ್ರದರ್ಶನವನ್ನು ನೀಡಿದ ವಿದ್ಯಾರ್ಥಿಗಳಿಗೆಲ್ಲ ಉತ್ತಮ ಭವಿಷ್ಯವಿದೆ ಎಂದು ಮುಳ್ಳೇರಿಯ ಮಂಡಲಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಹೇಳಿದರು.
ಧರ್ಮತ್ತಡ್ಕದಲ್ಲಿ ಶನಿವಾರ ಜರಗಿದ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯೋತ್ಸವದಲ್ಲಿ ಅವರು ಮಾತನಾಡಿದರು.
ಶ್ರೀಗುರುಗಳ, ದೇವರ ಸೇವೆಗೆ ಮೊದಲ ಆದ್ಯತೆ ನೀಡಿದವನಿಗೆ ಬದುಕಿನಲ್ಲಿ ಖಂಡಿತ ಸೋಲಿಲ್ಲ. ಅಲ್ಪ ಪ್ರಯತ್ನದಿಂದಲೇ ಮಹತ್ತಾದುದನ್ನು ಪಡೆಯಲು ಅವರ ಕಾರುಣ್ಯ ಒದಗಿ ಬರುತ್ತದೆ. ಸಮಾಜದ ಎಲ್ಲರೆಡೆಗೂ ಸ್ನೇಹ ಹಸ್ತವನ್ನು ಚಾಚಿ ಶ್ರೀಗುರುಗಳು ತೋರಿದ ಹಾದಿಯಲ್ಲಿ ಮುನ್ನಡೆಯೋಣ. ಹಿರಿಯರು ತೋರಿದ ಸುಸಂಸ್ಕೃತ ಪಥದಲ್ಲಿ ಕಿರಿಯರು ಮುನ್ನಡೆಯಲು ಮೊದಲ ಆರಂಭ ಮನೆಯಿಂದಲೇ ಆಗಬೇಕು. ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಮುಳ್ಳೇರಿಯ ಮಂಡಲ ಶಿಷ್ಯ ಮಾಧ್ಯಮ ಪ್ರಧಾನ ಬಳ್ಳಮೂಲೆ ಗೋವಿಂದ ಭಟ್ ನುಡಿದರು.
ವಲಯಾಧ್ಯಕ್ಷ ಬಿ.ಎಲ್ ಶಂಭು ಹೆಬ್ಬಾರ್ ಧ್ವಜಾರೋಹಣ ನೆರವೇರಿಸಿದರು. ಮಾತೃ ಪ್ರಧಾನೆ ಲಲಿತಾ ಮಾಣಿ ಅವರು ದೀಪ ಬೆಳಗಿಸಿದರು. ಶಂಖನಾದ, ಗುರುವಂದನೆ, ಗೋಸ್ತುತಿಯನ್ನು ಮಾಡಲಾಯಿತು. ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದ ವಲಯ ವೈದಿಕ ಪ್ರಧಾನರಾದ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಶ್ರೀಮಠದ ವಿವಿಧ ನಿರ್ದೇಶನಗಳು ಮನೆ ಮನೆಗೆ ತಲುಪಲು ಶ್ರೀಮಠದಲ್ಲಿ ಯಾವೆಲ್ಲ ವಿಧಾನಗಳಿವೆ ಎಂಬುದನ್ನು ತಿಳಿಸಿ, ವಲಯ ಎಲ್ಲರೂ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮ ಅನುಷ್ಠಾನಗಳನ್ನು ಚಾಚೂ ತಪ್ಪದೆ ಪಾಲಿಸಿದರೆ ಜೀವನದಲ್ಲಿ ಯಶಸ್ಸು ಗಳಿಸಬಹುದು. ಪ್ರತಿಯೊಬ್ಬರೂ ಶ್ರೀಗುರುಗಳ ನಿರ್ದೇಶನದ ಅನುಷ್ಠಾನಗಳನ್ನು ಪಾಲಿಸುವ ಪ್ರಯತ್ನ ಮಾಡಬೇಕು. ಮನೆಗಳಲ್ಲಿ ಹಿರಿಯರು ಕಿರಿಯರಿಗೆ ಮಾದರಿಯಾಗಬೇಕು .ಇಂತಹ' ವಲಯೋತ್ಸವಗಳು ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ಸದವಕಾಶ. ಇದನ್ನು ಸದುಪಯೋಗ ಪಡಿಸಬೇಕು. ಮಕ್ಕಳ ಕೈಯಿಂದ ಮೊಬೈಲ್ ಪಕ್ಕಕ್ಕಿರಿಸಿ ಅವರಿಗೆ ಉತ್ತಮ ಸಂಸ್ಕಾರ ದೊರಕುವಂತೆ ಮಾಡುವುದು ಹಿರಿಯರ ಕರ್ತವ್ಯ' ಎಂದರು.
ಶ್ರೀದುರ್ಗಾಪರಮೇಶ್ವರಿ ಪ್ರೌಢಶಾಲಾ ಪ್ರಬಂಧಕ ಶಂಕರನಾರಾಯಣ ಭಟ್ ನೇರೋಳು ಮಾತನಾಡಿದರು. ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ವಾರ್ಷಿಕ ವರದಿ ನೀಡಿದರು. ಕೋಶಾಧ್ಯಕ್ಷ ರಾಜಗೋಪಾಲ ಅಮ್ಮಂಕಲ್ಲು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಸುದೀರ್ಘಕಾಲ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನಿಕಟಪೂರ್ವ ವಲಯಾಧ್ಯಕ್ಷ ರಾಮ ಭಟ್ ಅಮ್ಮಂಕಲ್ಲು, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆಗೈದ ಎಂ. ತಿಮ್ಮಣ್ಣ ಭಟ್ ಪೆದಮಲೆ , ಗುರಿಕ್ಕಾರರಾಗಿ ಮತ್ತು ಶಿಕ್ಷಕರಾಗಿ ಸೇವೆ ಸಲ್ಲಿಸಿದ ಎಡಕ್ಕಾನ ಕೇಶವ ಭಟ್ ಪೆರ್ಮುದೆ ಮತ್ತು ನಾಟಿವೈದ್ಯ ಪದ್ದತಿಯ ಚಿಕಿತ್ಸಾ ಕ್ಷೇತ್ರದಲ್ಲಿ ಸೇವೆಗೈದ ವೆಂಕಟೇಶ್ವರಿ ಅಮ್ಮ ದಂಡೆಪ್ಪಾಡಿ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ವಲಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಪ್ರತಿಭಾಪ್ರದರ್ಶನ ನಡೆಯಿತು. ವಲಯ ಸಂಘಟನಾ ಕಾರ್ಯದರ್ಶಿ ಉಮೇಶ್ ಜಿ.ಎನ್ ಗುಂಪೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ವಾಹಿನಿ ಪ್ರಧಾನೆ ನಳಿನಿ ಬೆಜಪ್ಪೆ ವಂದನಾರ್ಪಣೆ ಸಲ್ಲಿಸಿದರು. ಶಾಂತಿಮಂತ್ರ,ಶಂಖನಾದದೊಂದಿಗೆ ವಲಯೋತ್ಸವ ಸಂಪನ್ನವಾಯಿತು.
ಗುರುನಿರ್ದೇಶನಗಳನ್ನು ಪಾಲಿಸುವಲ್ಲಿ ಗುಂಪೆ ವಲಯದ ಕಾರ್ಯಗಳು ಶ್ಲಾಘನೀಯ - ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ
0
ಡಿಸೆಂಬರ್ 13, 2022
Tags




.jpg)
