ಕಾಸರಗೋಡು: ಪೆರಿಯ ಅಯಂಪಾರ ಚಕ್ಕಿಪಳ್ಳ ನಿವಾಸಿ ಸುಬೈದಾ(60)ಕೊಲೆ ಪ್ರಕರಣದ ಪ್ರಥಮ ಆರೋಪಿ ಮಧೂರು ಸನಿಹದ ಪಟ್ಲ ಕುಂಜಾರು ಕೋಟೆಕಣಿ ನಿವಾಸಿ ಅಬ್ದುಲ್ ಖಾದರ್(34)ಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ಒಂದುವರೆ ಲಕ್ಷ ರೂ. ದಂಡ ವಿಧಿಸಿದೆ. ಕೊಲೆ, ಮನೆಗೆ ನುಗ್ಗಿ ದರೋಡೆ ಮುಂತಾದ ಕೃತ್ಯಗಳಿಗೆ ಸಂಬಂಧಿಸಿ ಈ ಶಿಕ್ಷೆ.
ಎರಡನೇ ಆರೋಪಿ ಸುಳ್ಯ ಅಜ್ಜಾವರ ನಿವಾಸಿ ಅಬ್ದುಲ್ ಅಜೀಜ್ ಅಲಿಯಾಸ್ ಅಜ್ಜಾವರ ಅಜೀಜ್ ತಲೆಮರೆಸಿಕೊಂಡಿದ್ದಾನೆ. ಮೂರನೇ ಆರೋಪಿ ಮಾನ್ಯದ ಆರ್ಷಾದ್ ಮೇಲಿನ ಆರೋಪ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಈತನನ್ನು ಖುಲಾಸೆಗೊಳಿಸಲಾಗಿದೆ. ನಾಲ್ಕನೇ ಆರೋಪಿ ಕುದ್ರೆಪ್ಪಾಡಿ ನಿವಾಸಿ ಅಬ್ದುಲ್ ಅಜೀಜ್ ಯಾನೆ ಬಾವಾ ಅಜೀಜ್‍ನನ್ನು ಮಾಫಿಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಆರ್ಷಾದ್‍ನನ್ನು ಖುಲಾಸೆಗೊಳಿಸಿರುವ ಬಗ್ಗೆ ಅಪೀಲು ಸಲ್ಲಿಸುವುದಾಗಿ ಸುಬೈದಾ ಸಂಬಂಧಿಕರು ತಿಳಿಸಿದ್ದಾರೆ.
ಎರಡನೇ ಆರೋಪಿ ಸುಳ್ಯ ಅಜ್ಜಾವರ ನಿವಾಸಿ ಅಬ್ದುಲ್ ಅಜೀಜ್‍ನನ್ನು ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಬಂಧಿಸಲಾಗಿದ್ದು, ಬೇರೊಂದು ಕೇಸಿನ ವಿಚಾರಣೆಗಾಗಿ 2018 ಸೆ. 14ರಂದು ಸುಳ್ಯ ಪೊಲೀಸರು ಈತನನ್ನು ಕಾಸರಗೋಡಿನಿಂದ ಸುಳ್ಯದ ನ್ಯಾಯಾಲಯದಲ್ಲಿ ಹಾಜರುಪಡಿಸಿ ವಾಪಸಾಗುವ ಮಧ್ಯೆ ಸುಳ್ಯ ಬಸ್ ನಿಲ್ದಾಣದಲ್ಲಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದನು.
ಪೆರಿಯಾದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಸುಬೈದಾ ಅವರ ಮೃತದೇಹ 2018 ಜ. 19ರಂದು ಮನೆಯೊಳಗೆ ಪತ್ತೆಯಾಗಿತ್ತು. ನೀರು ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿದ ತಂಡ ಇವರ ಮುಖಕ್ಕೆ ಕ್ಲೋರೋಫಾಂ ವಿಷದ್ರಾವಕ ಸಿಂಪಡಿಸಿ ಪ್ರಜ್ಞೆ ತಪ್ಪಿಸಿ, ಕತ್ತು ಹಿಸುಕಿ ಕೊಲೆ ನಡೆಸಿದೆ. ನಂತರ ಮೈಮೇಲಿದ್ದ 27ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದ ಬಗ್ಗೆ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಕೊಲೆ ನಡೆಯುವ ಮೊದಲ ದಿನ ತಂಡ ಸ್ಥಳಕ್ಕಾಗಮಿಸಿ ಸುಬೈದಾ ಅವರ ಚಲನವಲನದ ಬಗ್ಗೆ ಮಾಃಇತಿ ಪಡೆದುಕೊಂಡಿತ್ತು. ಅಲ್ಲದೆ ಪ್ರಥಮ ಆರೋಪಿ ಅಬ್ದುಲ್ ಖಾದರ್ ತಿಂಗಳುಗಳ ಹಿಂದೆ ಸುಬೈದಾ ಅವರ ಮನೆ ಸಮೀಪ ಬಾಡಿಗೆ ಕೊಠಡಿಯೊಂದರಲ್ಲಿ ವಾಸ್ತವ್ಯ ಹೂಡಿದ್ದನು. ಕೊಲೆ ನಡೆದ ಎರಡು ವಾರದೊಳಗೆ ಎಲ್ಲ ಆರೋಪಿಗಳನ್ನು ಬಂಧಿಸಲಾಗಿತ್ತು. ಅಂದಿನ ಎಸ್.ಪಿ ಕೆ.ಜಿ ಸೈಮನ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು.







