ವಾಷಿಂಗ್ಟನ್: ವಿಶಿಷ್ಟ ಕಾರ್ಯತಂತ್ರದ ಸ್ವರೂಪ ಹೊಂದಿರುವ ಭಾರತವು ಅಮೆರಿಕದ ಒಂದು ಪಾಲುದಾರ ಮಿತ್ರ ದೇಶವಷ್ಟೇ ಆಗಿರದೆ ಸ್ವತಃ ಅದುವೇ ಒಂದು ಮಹಾನ್, ಸ್ವತಂತ್ರ ಶಕ್ತಿ ರಾಷ್ಟ್ರವಾಗಿದೆ ಎಂದು ಅಮೆರಿಕ ಬಣ್ಣಿಸಿದೆ. ಭಾರತ-ಅಮೆರಿಕ ಬಾಂಧವ್ಯವನ್ನು ಕೇವಲ ಚೀನಾ ಕುರಿತ ಆತಂಕದ ಮೇಲೆ ರೂಪುಗೊಂಡ ಸಂಬಂಧವಲ್ಲ ಎಂದು ಶ್ವೇತ ಭವನದ ಅಧಿಕಾರಿಗಳು ಹೇಳಿದ್ದಾರೆ.
ಕಳೆದ 20 ವರ್ಷಗಳಲ್ಲಿ ಉಭಯ ದೇಶಗಳ ನಡುವಣ ಬಾಂಧವ್ಯ ತ್ವರಿತವಾಗಿ 'ಆಳಗೊಂಡಂತೆ ಹಾಗೂ ಬಲಗೊಂಡಂತೆ' ಬೇರಾವುದೇ ದೇಶಗಳ ನಡುವೆ ಸಂಭವಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಗುರುವಾರ ನಡೆದ ಆಸ್ಪೆನ್ ಭದ್ರತಾ ವೇದಿಕೆ ಸಭೆಯಲ್ಲಿ ಭಾಗವಹಿಸಿದ್ದ ಶ್ವೇತ ಭವನದ ಏಷ್ಯಾ ಸಮನ್ವಯಕಾರ ಕರ್ಟ್ ಕ್ಯಾಂಪ್ಬೆಲ್ ಭಾರತದ ಮಹತ್ವವನ್ನು ಒತ್ತಿ ಹೇಳಿದರು. ಅಮೆರಿಕಕ್ಕೆ 21ನೇ ಶತಮಾನದಲ್ಲಿ ಭಾರತ ಅತಿ ಮಹತ್ವದ ದ್ವಿಪಕ್ಷೀಯ ಮಿತ್ರ ದೇಶವಾಗಿದೆಯೆನ್ನುವುದು ತಮ್ಮ ಅಭಿಪ್ರಾಯ ಎಂದರು.
ಅಮೆರಿಕ ತನ್ನ ಇನ್ನೂ ಹೆಚ್ಚಿನ ಸಾಮರ್ಥ್ಯವನ್ನು ಹೂಡಿಕೆ ಮಾಡಬೇಕಿದೆ ಮತ್ತು ಜನತೆಯ ನಡುವಣ ಸಂಬಂಧವನ್ನು ಕಟ್ಟಬೇಕು, ತಂತ್ರಜ್ಞಾನ ಮತ್ತು ಇತರ ವಿಚಾರಗಳಲ್ಲಿ ಕೆಲಸ ಮಾಡಬೇಕು ಎಂದು ಕ್ಯಾಂಪ್ಬೆಲ್ ಹೇಳಿದರು. ಭಾರತ ಒಂದು ಸ್ವತಂತ್ರ, ಶಕ್ತಿಶಾಲಿ ದೇಶವಾಗುವ ಬಯಕೆ ಹೊಂದಿದೆ. ಅದು ಇನ್ನೊಂದು ಮಹಾನ್ ಶಕ್ತಿಯಾಗಲಿದೆ ಎಂದು ಅವರು ಹೇಳಿದರು. ಆದರೆ, ಎರಡೂ ದೇಶಗಳ ಆಡಳಿತಶಾಹಿಗಳಲ್ಲಿ ಹಿಂಜರಿಕೆಯಿದ್ದು ಅನೇಕ ಸವಾಲುಗಳಿವೆ ಎಂದು ಕ್ಯಾಂಪ್ಬೆಲ್ ಒಪ್ಪಿಕೊಂಡರು.





