ತಿರುವನಂತಪುರಂ: ಕೇರಳದ ಕೊಚ್ಚಿ ಮೂಲದ ಕವಯಿತ್ರಿ (Kerala poet) ಚಿತ್ತಿರಾ ಕುಸುಮನ್ (Chithira Kusuman) ಎಂಬವರ ಫೇಸ್ಬುಕ್ ಪುಟದ ಫೋಟೋಗಳನ್ನು ಅಶ್ಲೀಲ ವೆಬ್‍ಸೈಟ್ ಒಂದರಲ್ಲಿ ಅಪ್‍ಲೋಡ್ ಮಾಡಲಾಗಿರುವ ಕುರಿತಂತೆ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.
ತಾವು ಕೊಚ್ಚಿಯ ಇನ್ಫೋ ಪಾರ್ಕ್‍ನಲ್ಲಿರುವ ಸೈಬರ್ ಸೆಲ್ ಕಚೇರಿಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಪ್ರತಿಕ್ರಿಯೆಯಿಲ್ಲ ಎಂದು ಕುಸುಮನ್ ಹೇಳಿದ್ದಾರೆ ಎಂದು thenewsminute.com ವರದಿ ಮಾಡಿದೆ.
ತಮ್ಮ ಫೇಸ್ಬುಕ್ ಫೋಟೋಗಳನ್ನು ದುರ್ಬಳಕೆ ಮಾಡಿದ ಸೈಟ್‍ನ ಯುಆರ್ ಎಲ್ ಅನ್ನೂ ನವೆಂಬರ್ 30 ರಂದು ದಾಖಲಿಸಿದ್ದ ದೂರಿನಲ್ಲಿ ಅವರು ನೀಡಿದ್ದರು.
ತಮ್ಮ ದೂರಿನ ಕುರಿತು ಪೊಲೀಸರ ಅನಾಸ್ಥೆಯನ್ನು ವಿವರಿಸಿ ಡಿಸೆಂಬರ್ 13 ರಂದು ಚಿತ್ತಿರ ಫೇಸ್ಬುಕ್ ಪೋಸ್ಟ್ ಒಂದನ್ನು ಮಾಡಿದ್ದಾರೆ. ಫೇಸ್ಬುಕ್ ಫ್ರೆಂಡ್ ಮೂಲಕ ಈ ವಿಚಾರ ತಿಳಿಯಿತು ಆ ಸೈಟ್ ಪರಿಶೀಲಿಸಿದಾಗ ಇತರ ಮಹಿಳೆಯರ ಚಿತ್ರಗಳೂ ಇರುವುದು ತಿಳಿದು ಬಂತು. ದೂರು ನೀಡಿದಾಗ ನನ್ನ ಪ್ರೊಫೈಲ್ ಏಕೆ ಲಾಕ್ ಮಾಡಿಲ್ಲ ಎಂದು ಅಧಿಕಾರಿಯೊಬ್ಬರು ಕೇಳಿದರು ಹಾಗೂ ಹಾಗೆ ಮಾಡಿರದೇ ಇದ್ದರೆ ಜನರು ಚಿತ್ರಗಳನ್ನು ದುರ್ಬಳಕೆ ಮಾಡುತ್ತಾರೆಂದು ಹೇಳಿ ಅವರು ಅಪಹಾಸ್ಯ ಮಾಡಿದರು ಎಂದು ಚಿತ್ತಿರನ್ ಬರೆದಿದ್ದಾರೆ.
ಫೇಸ್ಬುಕ್ ಮೂಲಕ ವಂಚನೆಯಿಂದ ಹಣ ಪಡೆಯುವುದನ್ನು ತಡೆಯಲು ಪೊಲೀಸರಿಗೆ ಅಸಾಧ್ಯವಾಗಿರುವಾಗ ಫೋಟೋ ದುರ್ಬಳಕೆ ಕುರಿತು ಏನು ಮಾಡಲು ಸಾಧ್ಯ ಎಂದು ಆ ಅಧಿಕಾರಿ ಕೇಳಿದರು ಎಂದು ಕವಯಿತ್ರಿ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.
ತಮ್ಮ ದೂರಿನ ಬಗ್ಗೆ ಪೊಲೀಸರು ಸ್ಪಂದಿಸದೇ ಇದ್ದುದರಿಂದ ಫೇಸ್ಬುಕ್ ಪೋಸ್ಟ್ ಮಾಡಬೇಕಾಯಿತು ಎಂದೂ ಅವರು ಹೇಳಿಕೊಂಡಿದಾರೆ.
ಸೈಬರ್ ಅಪರಾಧ ಪ್ರಕರಣಗಳಲ್ಲಿ ಸಹಾಯ ಮಾಡಬೇಕಾದ ಸೈಬರ್ ಪೊಲೀಸರು ಕ್ರಮಕೈಗೊಳ್ಳದೇ ಇರುವ ಬಗ್ಗೆ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೇಖಕ ಮತ್ತು ಹೋರಾಟಗಾರ ಸಿವಿಕ್ ಚಂದ್ರನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣ ದಾಖಲಿಸಿದ್ದ ಸಂತ್ರಸ್ತೆಯನ್ನು ಬೆಂಬಲಿಸಿ ಚಿತ್ತಿರಾ ಈ ಹಿಂದೆ ಫೇಸ್ಬುಕ್ ಪೋಸ್ಟ್ ಅನ್ನು ಜುಲೈ ತಿಂಗಳಿನಲ್ಲಿ ಮಾಡಿದ್ದರು.





