ಕೋಲ್ಕತ್ತ: ಜಾರ್ಖಂಡ್‌ನ ನಟಿ ಎಂದು ಹೇಳಲಾದ ರಿಯಾ ಕುಮಾರಿ (30) ಎನ್ನುವರನ್ನು ರಾಂಚಿ-ಕೋಲ್ಕತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ಯಂತ ಸನಿಹದಿಂದ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಬುಧವಾರ ಬೆಳಿಗ್ಗೆ 6 ಗಂಟೆಯ ಸುಮಾರು ಹೌರಾ ಜಿಲ್ಲೆಯ ಮಹೀಶ್‌ರೇಖಾ ಸೇತುವೆ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ರಿಯಾ ಕುಮಾರಿ ಅವರು ತಮ್ಮ ಮೂರು ವರ್ಷದ ಮಗಳು ಹಾಗೂ ಗಂಡ ಪ್ರಕಾಶ್ ಕುಮಾರ್ ಅವರೊಡನೆ ರಾಂಚಿಯಿಂದ ಕೋಲ್ಕತ್ತಕ್ಕೆ ಕಾರಿನಲ್ಲಿ ತೆರಳುತ್ತಿದ್ದರು.
'ಮಹೀಶ್‌ರೇಖಾ ಸೇತುವೆ ಬಳಿ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದಾಗ ಮೂವರು ದುಷ್ಕರ್ಮಿಗಳು ನಮ್ಮ ಬಳಿ ಬಂದು ದರೋಡೆ ಮಾಡುವ ಉದ್ದೇಶದಿಂದ ಹಲ್ಲೆಗೆ ಯತ್ನಿಸಿದರು. ಈ ವೇಳೆ ವಿರೋಧಿಸಲು ಹೋದ ರಿಯಾ ಕುಮಾರಿಗೆ ಅತ್ಯಂತ ಸನಿಹದಿಂದ ಗುಂಡು ಹಾರಿಸಿದರು. ಇದರಿಂದ ತೀವ್ರ ರಕ್ತಸ್ರಾವವಾಗಿ ರಿಯಾ ಆಸ್ಪತ್ರೆಗೆ ತೆಗದುಕೊಂಡು ಹೋಗುವ ಮಾರ್ಗದಲ್ಲಿ ಮೃತಪಟ್ಟಳು' ಎಂದು ರಿಯಾಳ ಗಂಡ ಪ್ರಕಾಶ್ ಕುಮಾರ್ ಪೊಲೀಸರೆದರು ಹೇಳಿಕೆ ನೀಡಿದ್ದಾರೆ.
ಆದರೆ, ಈ ಬಗ್ಗೆ ಪ್ರಕಾಶ್ ಕುಮಾರ್ ಅವರ ಮೇಲೂ ಹೌರಾ ಪೊಲೀಸರಿಗೆ ಅನುಮಾನ ಮೂಡಿದ್ದು, ಪ್ರಕಾಶ್ ಕುಮಾರ್ ಹೇಳಿಕೆಗಳು ಅನುಮಾನಾಸ್ಪದವಾಗಿವೆ ಎಂದಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರಿಯಾ ಕುಮಾರಿ ಜಾರ್ಖಂಡ್‌ನ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದರು ಎಂದು ಹೇಳಲಾಗಿದೆ.


