ನವದೆಹಲಿ: ಆಂಡ್ರಾಯ್ಡ್ ಪ್ಲಾಟ್‌ಫಾರಂನಲ್ಲಿ ಸ್ಥಾನ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣದ ಸಂಬಂಧ ಗೂಗಲ್ ಕಂಪನಿಯು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಆಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯ ಬಳಕೆ ಇರುವಲ್ಲಿ ತಾನು ಹೊಂದಿರುವ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಕಾರಣಕ್ಕೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್ ಕಂಪನಿಗೆ ₹1,337.76 ಕೋಟಿ ದಂಡ ವಿಧಿಸಿದೆ. ಇದಕ್ಕೆ ತಡೆ ನೀಡುವಂತೆ ಕೋರಿ ಕಂಪನಿಯು ಎನ್‌ಸಿಎಲ್‌ಎಟಿಗೆ ಮನವಿ ಸಲ್ಲಿಸಿತ್ತು. ಆದರೆ, ದಂಡದಲ್ಲಿ ಶೇ 10ರಷ್ಟು ಮೊತ್ತವನ್ನು ಪಾವತಿಸುವಂತೆ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ) ನಿರ್ದೇಶನ ನೀಡಿದೆ. ನ್ಯಾಯಂಡಳಿಯ ಈ ಆದೇಶದ ವಿರುದ್ಧ ಗೂಗಲ್ ಇದೀಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ವಿಚಾರಣೆ ದಿನಾಂಕ ಇನ್ನಷ್ಟೇ ನಿಗದಿ ಆಗಬೇಕಿದೆ.
ಈ ಕುರಿತು ಗೂಗಲ್ ವಕ್ತಾರರು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.





