HEALTH TIPS

ಚಿಕನ್​ ತಿಂದ ಯುವತಿ ಸಾವು ಪ್ರಕರಣ: ಪುದಿನಾ ಚಟ್ನಿ ಮೇಲೆ ಸಂಶಯ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವೈದ್ಯಾಧಿಕಾರಿ!

 

             ಕಾಸರಗೋಡು: ಬಿರಿಯಾನಿ ತಿಂದ ಬಳಿಕ ಮೃತಪಟ್ಟ 19 ವರ್ಷದ ಅಂಜುಶ್ರೀ ಪಾರ್ವತಿ ಸಾವಿಗೆ ಕಾರಣ ಏನೆಂಬುದನ್ನು ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ. ರಾಮದಾಸ್​ ತಿಳಿಸಿದ್ದಾರೆ.

             ಉದುಮದಲ್ಲಿರುವ ಹೋಟೆಲ್​ ಒಂದರಲ್ಲಿ ಆನ್​ಲೈನ್​ ಮೂಲಕ ಕುಜಿಮಂತಿ ಹೆಸರಿನ ಚಿಕನ್​ ಆಹಾರ ತರಿಸಿ ಅಂಜುಶ್ರೀ ಸೇವಿಸಿದ್ದಳು.

                    ಇದಾದ ಬಳಿಕ ಆಕೆಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಪರಿಸ್ಥಿತಿ ಗಂಭೀರವಾದ ಬೆನ್ನಲ್ಲೇ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.

                ಆರೋಗ್ಯ ನಿರ್ದೇಶಕರಿಗೆ ನೀಡಿದ ಪ್ರಾಥಮಿಕ ವರದಿಯಲ್ಲಿ ಬ್ಯಾಕ್ಟೀರಿಯಾದಿಂದ ರಕ್ತ ವಿಷವಾಗಿ ಅಂಜುಶ್ರೀ ಮೃತಪಟ್ಟಿದ್ದಾಳೆಂದು ಜಿಲ್ಲಾ ವೈದ್ಯಾಧಿಕಾರಿ ರಾಮದಾಸ್​ ತಿಳಿಸಿದ್ದಾರೆ. ರಕ್ತ ವಿಷವಾಗುವುದನ್ನು ಸೆಪ್ಟಿಸೆಮಿಯಾ ಎಂದು ಕರೆಯಲಾಗುತ್ತದೆ. ಇದರಿಂದ ಬಹು ಅಂಗಾಂಗಗಳು ಫೇಲ್ಯೂರ್​ ಆಗಿ ಮರಣ ಸಂಭವಿಸುತ್ತದೆ ಎಂದು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಅಂಜುಶ್ರೀ ಫುಡ್ ಪಾಯ್ಸನಿಂಗ್​ನಿಂದ ಮೃತಪಟ್ಟಿರುವುದು ತಿಳಿದ ಬೆನ್ನಲ್ಲೇ ಆಸ್ಪತ್ರೆಗಳು ಅನುಸರಿಸುತ್ತಿರುವ ಚಿಕಿತ್ಸಾ ಪ್ರೋಟೋಕಾಲ್ ಕುರಿತು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಡಿಎಂಒ ಅವರಿಂದ ವಿವರವಾದ ವರದಿಯನ್ನು ಕೇಳಿದ್ದರು.

                  ಕಾಸರಗೋಡಿನ ಚೆಮ್ನಾಡ್ ಗ್ರಾಮ ಪಂಚಾಯಿತಿಯ ತಳಕಳಾಯಿ ಗ್ರಾಮದ ಅಂಜುಶ್ರೀ, ಡಿಸೆಂಬರ್ 31 ರಂದು ಕಾಸರಗೋಡು ಪಟ್ಟಣದ ಅಡ್ಕತ್‌ಬೈಲ್‌ನಲ್ಲಿರುವ ಅಲ್ ರೊಮ್ಯಾನ್ಶಿಯಾ ರೆಸ್ಟೊರೆಂಟ್‌ನಲ್ಲಿ ಒಂದು ಫುಲ್ ಚಿಕನ್ 65, ಮಯೋನೈಸ್ ಮತ್ತು ಸಲಾಡ್ ಅನ್ನು ಆರ್ಡರ್ ಮಾಡಿದ್ದರು. ಮಧ್ಯಾಹ್ನದ ಊಟಕ್ಕೆ ಮನೆಗೆ ತಲುಪಿಸಿದ ಆಹಾರವನ್ನು ಅಂಜುಶ್ರೀ, ಆಕೆಯ ತಾಯಿ ಅಂಬಿಕಾ, ಸಹೋದರ ಶ್ರೀಕುಮಾರ್ (18) ಮತ್ತು ಸಂಬಂಧಿಕರಾದ ಶ್ರೀನಂದನ ಮತ್ತು ಸಹೋದರಿ ಅನುಶ್ರೀ ಸೇವಿಸಿದ್ದರು.

              ಚಿಕನ್ ಮಂತಿ ಮತ್ತು ಚಿಕನ್ 65 ಜೊತೆಗೆ ನೀಡಿದ ಪುದೀನ ಚಟ್ನಿಯಿಂದಾಗಿ ಆಹಾರ ವಿಷವಾಗಿರಬಹುದೆಂದು ವೈದ್ಯಾಧಿಕಾರಿ ಮೊದಲ ಸಂದೇಹ ಪಟ್ಟಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಬಿಡುಗಡೆ ಮಾಡಿರುವ ವೈದ್ಯಾಧಿಕಾರಿ ಹೇಳಿಕೆಯಲ್ಲಿ ಪುದಿನಾ ಚಟ್ನಿಯೇ ಫುಡ್ ಪಾಯ್ಸನ್​ಗೆ ಕಾರಣ ಎಂಬ ಭಾವನೆ ಮೂಡಿತು. ಆದರೆ, ಆ ಹೇಳಿಕೆಯನ್ನು ಇದೀಗ ಹಿಂಪಡೆಯಲಾಗಿದೆ. ಅಂಜುಶ್ರೀ ಮತ್ತು ಇಬ್ಬರು ಸೋದರಸಂಬಂಧಿಗಳಲ್ಲಿ ಒಬ್ಬರು ಮಾತ್ರ ಪುದಿನಾ ಚಟ್ನಿ ಸೇವಿಸಿದ್ದರು ಮತ್ತು ಇಬ್ಬರೂ ಅಸ್ವಸ್ಥರಾಗಿದ್ದರು ಎಂದು ಮೊದಲ ಹೇಳಿಕೆಯಲ್ಲಿ ತಿಳಿಸಲಾಗಿತ್ತು. ಪರಿಷ್ಕೃತ ಹೇಳಿಕೆಯಲ್ಲಿ ಪುದಿನಾ ಚಟ್ನಿ ಬಗ್ಗೆ ಉಲ್ಲೇಖಿಸಿಲ್ಲ. ವಿಷದ ಮೂಲವನ್ನು ಈಗ ತೀರ್ಮಾನಿಸಲು ಸಾಧ್ಯವಿಲ್ಲ. ಕುಟುಂಬವು ನಮಗೆ ತಿಳಿಸಿದ ಆಧಾರದ ಮೇಲೆ ಪ್ರಾಥಮಿಕ ವರದಿ ನೀಡಲಾಯಿತು ಎಂದು ಡಾ ರಾಮದಾಸ್ ಹೇಳಿದರು.

              ಥಳಕಳಾಯಿ ವಾರ್ಡ್ ಸದಸ್ಯೆ ರೇಣುಕಾ ಭಾಸ್ಕರನ್ ಮಾತನಾಡಿ, ಇಬ್ಬರು ಸೋದರ ಸಂಬಂಧಿ ಮತ್ತು ಅಂಜುಶ್ರೀ ಅಸ್ವಸ್ಥರಾಗಿದ್ದರು, ಆದರೆ ಅವರಲ್ಲಿ ಇಬ್ಬರು ಮಾತ್ರ ಪುದಿನಾ ಚಟ್ನಿ ಸೇವಿದ್ದರು. ಚಟ್ನಿ ಸೇವಿಸದ ಸೋದರ ಸಂಬಂಧಿಯೊಬ್ಬರಿಗೆ ಹೊಟ್ಟೆ ನೋವು ಮತ್ತು ತಲೆನೋವು ಕಾಣಿಸಿಕೊಂಡಿತು. ಆದರೆ, ಆಕೆ ಆಸ್ಪತ್ರೆಗೆ ಹೋಗಿಲ್ಲ ಎಂದು ರೇಣುಕಾ ಮಾಹಿತಿ ನೀಡಿದರು.

              ಚಿಕನ್​ ಸೇವಿಸಿದ ಬಳಿಕ ಅಂಜುಶ್ರೀ ಮತ್ತು ಇತರ ಸೋದರ ಸಂಬಂಧಿ ವಾಂತಿ ಮಾಡಿಕೊಂಡು ಸುಸ್ತಾಗಿದ್ದರು. ಇಬ್ಬರನ್ನೂ ಜನವರಿ 1 ರಂದು ಡೆಲ್ಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು 'ಪ್ರಾಥಮಿಕ ಆರೈಕೆ' ನೀಡಿದರು ಮತ್ತು ಇಬ್ಬರಮ್ಮುಇ ಮನೆಗೆ ಕಳುಹಿಸಿದ್ದರು. ಸೋದರ ಸಂಬಂಧಿ ನಿಧಾನವಾಗಿ ಚೇತರಿಸಿಕೊಂಡರೆ, ಅಂಜುಶ್ರೀ ಮೃತಪಟ್ಟಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries