ಲಖನೌ: 'ಧರ್ಮದ ಹೆಸರಿನಲ್ಲಿ ಮಹಿಳೆಯರು ಮತ್ತು ಶೂದ್ರರಿಗೆ ಮಾಡುವ ಅಪಮಾನಗಳಿಂದ ಆಗುವ ನೋವನ್ನು ಅವರು ಮಾತ್ರ ತಿಳಿದಿರುತ್ತಾರೆ' ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಸಾದ್ ಮೌರ್ಯ ಅವರು ಗುರುವಾರ ಹೇಳಿದರು.
ಮಹಾತ್ಮ ಗಾಂಧಿ ಅವರನ್ನು ಬ್ರಿಟಿಷರು ರೈಲಿನಿಂದ ಹೊರಹಾಕಿದ್ದ ಘಟನೆಯನ್ನು ಪ್ರಸ್ತಾಪಿಸಿರುವ ಅವರು, 'ಭಾರತೀಯರು ನಾಯಿಗಳು ಎಂದು ಹೇಳಿ ಗಾಂಧಿಯನ್ನು ಬ್ರಿಟಿಷರು ರೈಲಿನಿಂದ ಹೊರ ನೂಕಿದ ವೇಳೆ ಗಾಂಧಿ ಅನುಭವಿಸಿದ ನೋವು ಅವರಿಗೆ ಮಾತ್ರ ಗೊತ್ತು. ಅದೇ ರೀತಿ ಧರ್ಮದ ಹೆಸರಿನಲ್ಲಿ ಮಾಡುವ ನಿಂದನೆಗಳಿಂದ ಉಂಟಾಗುವ ನೋವು ಮಹಿಳೆಯರು ಮತ್ತು ಶೂದ್ರರಿಗೆ ಮಾತ್ರ ತಿಳಿದಿರುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪ್ರಮುಖ ನಾಯಕರಾಗಿರುವ ಅವರು ಇತ್ತೀಚೆಗಷ್ಟೇ ಹಿಂದೂ ಧಾರ್ಮಿಕ ಕೃತಿ 'ರಾಮಚರಿತ ಮಾನಸ'ದ ವಿರುದ್ಧ ನೀಡಿದ್ದ ಹೇಳಿಕೆಯಿಂದಾಗಿ ವಿವಾದಕ್ಕೆ ಗ್ರಾಸವಾಗಿದ್ದರು. ಹಜ್ರತ್‌ಗಂಜ್ ಸೇರಿ ಇನ್ನು ಕೆಲ ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.





