ಕಾಸರಗೋಡು: ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ಬಡವರ ಹೆಸರಿನಲ್ಲಿ ತೆರಿಗೆ ಮತ್ತು ಸೆಸ್ ವಸೂಲಿಮಾಡುವ ಮೂಲಕ ಜನಸಾಮಾನ್ಯರ ಜೀವನವನ್ನು ಸಂಕಷ್ಟಕ್ಕೆ ತಳ್ಳಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಉಪಾಧ್ಯಕ್ಷ, . ಬಿ. ಗೋಪಾಲ ಕೃಷ್ಣನ್ ತಿಳಿಸಿದ್ದಾರೆ. ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಬಡವರನ್ನು ಕಡೆಗಣಿಸಿ ಶ್ರೀಮಂತರನ್ನು ರಕ್ಷಿಸುವ ಸಿಪಿಎಂ ಅಜೆಂಡಾವನ್ನು ಹಣಕಾಸು ಸಚಿವರು ಬಜೆಟ್ ಮೂಲಕ ಜಾರಿಗೊಳಿಸಿದ್ದಾರೆ. ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳು ಸೇರಿದಂತೆ ಎಲ್ಲಾ ವಲಯ ಕೇರಳದಲ್ಲಿ ಕುಸಿತವನ್ನು ಕಾಣಲಾರಂಭಿಸಿದ್ದು, ಎಡರಂಗ ಸರ್ಕಾರದ ಕೇರಳ ಮಾದರಿ ಸಂಪೂರ್ಣ ವಿಫಲವಾಗಿದೆ. ಉಪ್ಪಿನಿಂದ ಕರ್ಪೂರದವರೆಗೆ ಕೇರಳ ಆಮದು ಮಾಡಿಕೊಳ್ಳುವ ರಾಜ್ಯವಾಗಿದೆ. ಕೇರಳದ ಜನತೆ ಪಿಣರಾಯಿ ಸರ್ಕಾರದ ಮೇಲೆ ಭರವಸೆ ಕಳೆದುಕೊಂಡಿದ್ದಾರೆ. ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂದು ಹೇಳುತ್ತಿದ್ದ ಎಡಪಕ್ಷದ ಹಲವು ಸಚಿವರು, ಮುಖಂಡರು ಭ್ರಷ್ಟಾಚಾರದಿಂದಲೇ ಸಂಪುಟದಿಂದ ಹೊರಹೋಗಿದ್ದಾರೆ. ನರೇಂದ್ರ ಮೋದಿ ಅವರು 9 ವರ್ಷಗಳ ಕಾಲ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಗಣೇಶನ್, ಕಾರ್ಯದರ್ಶಿಗಳಾದ ಕೆ.ಶ್ರೀಕಾಂತ್, ಕೆ.ಪಿ. ಪ್ರಕಾಶಬಾಬು, ಸೆಲ್ ಸಂಯೋಜಕ ಅಶೋಕನ್ ಕುಳನಾಡ್, ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರಮೀಳಾ ಸಿ. ನಾಯ್ಕ್, ಉತ್ತರ ವಲಯ ಕಾರ್ಯದರ್ಶಿ ಪಿ. ಸುರೇಶ್ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎ. ವೇಲಾಯುಧನ್ ಮತ್ತು ವಿಜಯಕುಮಾರ್ ರೈ ಉಪಸ್ಥಿತರಿದ್ದರು.
ಬಜೆಟ್ ಮೂಲಕ ಶ್ರೀಮಂತ ವರ್ಗವನ್ನು ರಕ್ಷಿಸುವ ಯೋಜನೆ ಜಾರಿಗೊಳಿಸಿದ ಎಡರಂಗ ಸರ್ಕಾರ-ಬಿಜೆಪಿ ಮುಖಂಡ ಗೋಪಾಲಕೃಷ್ಣನ್
0
ಫೆಬ್ರವರಿ 08, 2023


