ಎರ್ನಾಕುಳಂ : ಸಾಮಾನ್ಯವಾಗಿ ಯಾರೇ ಆದರೂ ಲಾಟರಿಯಲ್ಲಿ ಬಂಪರ್ ಬಹುಮಾನ ಬಂದರೆ ಸಂಭ್ರಮಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಲಾಟರಿಯಲ್ಲಿ 75 ಲಕ್ಷ ರೂ. ಗೆದ್ದರೂ ಹೆದರಿ ಪೊಲೀಸ್ ಠಾಣೆಗೆ ಧಾವಿಸಿದ್ದು ರಕ್ಷಣೆ ನೀಡುವಂತೆ ಕೋರಿಕೊಂಡಿದ್ದಾನೆ.
ಕೇರಳದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಬಂಗಾಳ ಮೂಲದ ಎಸ್.ಕೆ.ಬಾದೇಶ್ ಎಂಬಾತನೇ ಬಂಪರ್ ಬಹುಮಾನ ಬಂದಿದ್ದಕ್ಕೆ ಬೆದರಿ ಪೊಲೀಸ್ ಠಾಣೆಗೆ ಹೋದ ಕಾರ್ಮಿಕ. ಈತನಿಗೆ ಕೇರಳದ ಸ್ತ್ರೀಶಕ್ತಿ ಲಾಟರಿಯಲ್ಲಿ 75 ಲಕ್ಷ ರೂ. ಬಂಪರ್ ಬಹುಮಾನ ಒಲಿದಿತ್ತು. ಬಹಳಷ್ಟು ಸಮಯದಿಂದ ಲಾಟರಿ ಟಿಕೆಟ್ ತೆಗೆದುಕೊಳ್ಳುತ್ತಿದ್ದರೂ ಈತ ಗೆದ್ದಿರಲಿಲ್ಲ. ಆದರೆ ಈ ಸಲ ಬಂಪರ್ ಬಹುಮಾನ ಗೆದ್ದ ತಕ್ಷಣ ಈತ ಮುವತ್ತುಫುಜ ಪೊಲೀಸ್ ಠಾಣೆಗೆ ಹೋಗಿದ್ದಾನೆ.
ಇತ್ತೀಚೆಗೆ ಎರ್ನಾಕುಳಂನ ಚೊಟ್ಟಾಣಿಕರ ಎಂಬಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಬಾದೇಶ್ ಈ ಲಾಟರಿ ಟಿಕೆಟ್ ಖರೀದಿಸಿದ್ದ. ಈತನಿಗೆ ಸರಿಯಾಗಿ ಮಲಯಾಳಂ ಮಾತನಾಡಲಿಕ್ಕೆ ಬರುತ್ತಿಲ್ಲವಾದ್ದರಿಂದ ಏನು ಮಾಡಬೇಕು ಎಂದು ತೋಚದೆ ಗೆಳೆಯ ಕುಮಾರ್ ಎಂಬಾತನಿಗೆ ಕರೆ ಮಾಡಿ ನೆರವು ಕೋರಿದ್ದ.
ಮಂಗಳವಾರ ರಾತ್ರಿ ಲಾಟರಿಯಲ್ಲಿ ಬಹುಮಾನ ಗೆದ್ದ ವಿಷಯ ತಿಳಿಯುತ್ತಿದ್ದಂತೆ ಈತನಿಗೆ ತನ್ನಲ್ಲಿರುವ ಟಿಕೆಟ್ ಯಾರಾದರೂ ಕಿತ್ತುಕೊಳ್ಳಬಹುದು ಎಂಬ ಭಯ ಕಾಡಲಾರಂಭಿಸಿದೆ. ಅಲ್ಲದೆ ಲಾಟರಿಯನ್ನು ನಗದೀಕರಿಸಿಕೊಳ್ಳಲು ಯಾವ್ಯಾವ ಪ್ರಕ್ರಿಯೆ ಅನುಸರಿಸಬೇಕು ಎಂಬುದು ಕೂಡ ಈತನಿಗೆ ಗೊತ್ತಿಲ್ಲ. ಹೀಗಾಗಿ ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಕೋರಿದ್ದಾನೆ. ಪೊಲೀಸರು ರಕ್ಷಣೆ ನೀಡುವ ಭರವಸೆ ಕೂಡ ನೀಡಿದ್ದಾರೆ.
ಲಾಟರಿಯಲ್ಲಿನ ಹಣ ಸಿಕ್ಕ ಬಳಿಕ ಈತ ಬಂಗಾಳಕ್ಕೆ ಮರಳಲಿದ್ದಾನೆ ಎನ್ನಲಾಗಿದ್ದು, ಅಲ್ಲಿ ತನ್ನ ಮನೆಯನ್ನು ನವೀಕರಿಸಿ ಬಳಿಕ ಉಳಿದ ಹಣ ಕೃಷಿಯಲ್ಲಿ ತೊಡಗಿಸಲಿದ್ದಾನಂತೆ.





