ಕಾಸರಗೋಡು: ಕೃಷಿ, ನೀರಾವರಿ, ಬಡತನ ನಿವಾರಣೆಗೆ ಆದ್ಯತೆ ಕಲ್ಪಿಸುವುದರೊಂದಿಗೆ ಕಾಸರಗೋಡು ಜಿಲ್ಲಾ ಪಂಚಾಯಿತಿ 2023-24ನೇ ಸಾಲಿಗೆ ಮಿಗತೆ ಬಜೆಟನ್ನು ಬುಧವಾರ ಮಂಡಿಸಿದೆ. ಕಾಸರಗೋಡು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬಜೆಟ್ ಮಂಡನಾ ಸಭೆಯಲ್ಲಿ ಉಪಾಧ್ಯಕ್ಷ ಶಾನವಾಜ್ ಪಾದೂರು ಮಂಡಿಸಿದರು. ಒಟ್ಟು 81,70, 38, 118ರೂ. ಆದಾಯ ಮತ್ತು 80,89,99,000 ವೆಚ್ಚದ ಬಜೆಟ್ ಇದಾಗಿದೆ.
ಜಿಲ್ಲಾ ಪಂಚಾಯಿತಿ ವತಿಯಿಂದ ಜಾರಿಗೊಳಿಸಲಾಗುವ ಎನಿಮಲ್ ಬರ್ತ್ ಕಂಟ್ರೋಲ್(ಎ.ಬಿ.ಸಿ ಯೋಜನೆಗೆ ಹೊಸ ಕಟ್ಟಡ ನಿರ್ಮಾನ ಕಾಮಗಾರಿ ಈ ವರ್ಷ ಪೂರ್ತಿಗೊಳ್ಳಲಿದ್ದು, ಈ ಬಗ್ಗೆ ಮೊತ್ತವನ್ನು ಮ್ರಗಸಂರಕ್ಷಣಾ ಇಲಾಖೆಎಯಲ್ಲಿ ಮೀಸಲಿರಿಸಲು ತೀರ್ಮಾನಿಸಲಾಗಿದೆ. ಉದ್ಯೋಗ-ಉದ್ಯಮ ಶಿಲತೆ ಅಭಿವೃದ್ಧಿಗೆ ಬಜೆಟ್‍ನಲ್ಲಿ85ಲಕ್ಷ ರೂ. ಮೀಸಲಿರಿಸಲಾಗಿದೆ.
ಸಂಪೂರ್ಣ ಶುಚಿತ್ವ ಜಿಲ್ಲೆ ಎಂಬ ಗುರಿಯೊಂದಿಗೆ ಜೀರೋ ವೇಸ್ಟ್ ಕಾಸರಗೋಡು ಯೋಜನೆಗೆ 45ಲಕ್ಷ ರೂ. ಮೀಸಲಿರಿಸಿದೆ. ಸಮಗ್ರ ವಸತಿ ಯೋಜನೆಗೆ 7ಕೋಟಿ, ಜಿಲ್ಲಾಸ್ಪತ್ರೆ ಅಭಿವೃದ್ಧಿಗಾಗಿ ಒಂದು ಕೋಟಿ, ಎಲ್‍ಪಿ ಶಾಲಾ ಲ್ಯಾಬ್ ನವೀಕರಣ, ಪೀಠೋಪಕರಣ ಒದಗಿಸಲು ತಲಾ ಒಂದು ಕೋಟಿ, ಗ್ರಂಥಾಲಯಗಳಿಗೆ ಪ್ರೋಜೆಕ್ಟರ್ ವಿತರಣೆ, ಸ್ವಂತ ಭೂಮಿ ಹೊಂದಿರುವ ಐದು ಗ್ರಂಥಾಲಯಗಳಿಗೆ ತಲಾ ಹತ್ತು ಲಕ್ಷ ರೂ. ಮೀಸಲಿರಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ 3.49ಕೋಟಿ ರೂ., ಸಏವಾ ವಲಯಕ್ಕೆ 22.94ಕೋಟಿ ರೂ.ಮೀಸಲಿರಿಸಲಾಗಿದೆ.
ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದು. ಈ ಸಂದರ್ಭ ಮಾತನಾಡಿದ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಪಂ ಆದ್ಯತೆ ನೀಡಲಿದ್ದು, ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲಾಗುವುದು. ಜಿಲ್ಲೆಯಲ್ಲಿ ಸಾಕ್ಷರತೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ರಾಜ್ಯಮಟ್ಟದ ಕ್ರೀಡಾಮೇಳದಲ್ಲಿ ಭಾಗವಹಿಸುವ ಮಕ್ಕಳಿಗೆ ವಿಶೇಷ ತರಬೇತಿಯೊಂದಿಗೆ ಶಾಲೆಗಳಿಗೆ ಕ್ರೀಡಾ ಪರಿಕರ ಒದಗಿಸಲಾಗುವುದು. ಏಪ್ರಿಲ್ ವೇಳೆಗೆ ಎಲ್ಲಾ ಶಾಲೆಗಳಿಗೆ ಸೋಲಾರ್ ವ್ಯವಸ್ಥೆ ಅಳವಡಿಸಲಾಗುವುದು ಎಂದು ತಿಳಿಸಿದರು.
ಪ್ರತಿಪಕ್ಷ ಖಂಡನೆ:
ಜಿಲ್ಲೆಯ ಜನತೆ ಎದುರಿಸುತ್ತಿರುವ ಎಂಡೋಸಲ್ಫಾನ್ ದುಷ್ಪರಿಣಾಮದ ಬಗ್ಗೆ ಬಜೆಟ್‍ನಲ್ಲಿ ಚಕಾರವೆತ್ತದಿರುವ ಬಗ್ಗೆ ಕಾಂಗ್ರೆಸ್‍ನ ಗೀತಾಕೃಷ್ಣನ್ ಆಡಳಿತ ಸಮಿತಿಯನ್ನು ತರಾಟೆಗೆ ತಡೆಗೆದುಕೊಂಡರು.ಮೂಲ ಸೌಕರ್ಯ, ಆರೋಗ್ಯ ವಲಯವನ್ನೂ ಕಡೆಗಣಿಸಲಾಗಿದೆ. ಪ್ರತ್ಯೇಕ ಫಂಡ್ ಒದಗಿಸುವ ಮೂಲಕ ಜಿಲ್ಲೆಯ ಎಂಡೋಸಲ್ಫಾಣ್ ದುಷ್ಪರಿಣಾಮಪೀಡಿತರಿಗೆ ನೆರವು ಒದಗಿಸಲು ಜಿಲ್ಲಾ ಪಂಚಾಯಿತಿ ಮುಂದಾಗಬೇಕು ಎಂದು ತಿಳಿಸಿದರು.
ಕಾಸರಗೋಡಿನ ಜನತೆ ಪ್ರತಿವರ್ಷ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಬಜೆಟ್‍ನಲ್ಲಿ ಶಾಶ್ವತ ಪರಿಹಾರ ಕಲ್ಪಿಸುವ ಯಾವುದೇ ಯೋಜನೆ ರೂಪಿಸದಿರುವ ಬಗ್ಗೆ ಬಿಜೆಪಿಯ ಶೈಲಜಾ ಭಟ್ ಸಭೆಯಲ್ಲಿ ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಪ್ರಗತಿಪರ ಕೃಷಿಕರು ಒಟ್ಟು ಸೇರಿ ನಿರ್ಮಿಸುವ 200ಕ್ಕೂ ಹೆಚ್ಚು ಕಟ್ಟಗಳಿದ್ದು, ಈ ಕಟ್ಟಗಳ ನಿರ್ಮಾಣಕ್ಕೆ ಮೊತ್ತ ಮೀಸಲಿರಿಸುವ ಮೂಲಕ ಕೃಷಿಗೆ ಉತ್ತೇಜನ ನೀಡಲು ಜಿಪಂ ಮುಂದಾಗಬೇಕು. ರಸ್ತೆಗಳ ನಿರ್ಮಾಣಕ್ಕೂ ಕಡಿಮೆ ಮೊತ್ತ ಮೀಸಲಿರಿಸಲಾಗಿದೆ. ಇಂತಹ ಅವಗಣನೆ ಕೊನೆಗಾಣಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಜಿಪಂ ಸ್ಥಾಯೀ ಸಮಿತಿ ಅಧ್ಯಕ್ಷರು, ಜಿಪಂ ಸದಸ್ಯರು, ಜಿಪಂ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.





