ಚಂಡೀಗಢ: ಹರಿಯಾಣ ರಾಜ್ಯದಲ್ಲಿ ಬರೋಬ್ಬರಿ 110 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹುಲಿಯೊಂದು ಕಾಣಿಸಿಕೊಂಡಿದೆ.
ಹರಿಯಾಣದ ಯಮುನಾನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಕಾಳೇಸರ್ ರಾಷ್ಟ್ರೀಯ ಉದ್ಯಾನದಲ್ಲಿ ವಯಸ್ಕ ಹುಲಿಯೊಂದು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿದೆ.
ಈ ಹುಲಿಯ ಫೋಟೊಗಳನ್ನು ಹಂಚಿಕೊಂಡಿರುವ ಹರಿಯಾಣದ ಪರಿಸರ ಸಚಿವ ಕನ್ವರ್ ಪಾಲ್ ಅವರು, '1913 ರ ನಂತರ ಕಾಳೇಸರ್ ರಾಷ್ಟ್ರೀಯ ಉದ್ಯಾನದಲ್ಲಿ ರಾಷ್ಟ್ರೀಯ ಪ್ರಾಣಿ ಹುಲಿ ಕಾಣಿಸಿಕೊಂಡಿರುವುದು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಅರಣ್ಯ ಮತ್ತು ವನ್ಯಜೀವಿಗಳು ನಮ್ಮ ನೈಸರ್ಗಿಕ ಪರಂಪರೆಯಾಗಿದ್ದು, ಅವುಗಳ ರಕ್ಷಣೆಗೆ ನಾವೆಲ್ಲರೂ ಶ್ರಮಿಸಬೇಕಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಏಪ್ರಿಲ್ 18 ಮತ್ತು 19 ರಂದು ಕಾಳೇಸರ್ ರಾಷ್ಟ್ರೀಯ ಉದ್ಯಾನದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಈ ಹುಲಿ ಸೆರೆಯಾಗಿದೆ.
ಕಾಳೇಸರ್ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಗಡಿಗಳಿಗೆ ಹೊಂದಿಕೊಂಡಿದೆ. ಬಹುಶಃ ಈ ಹುಲಿ ಉತ್ತರಾಖಂಡದ ರಾಜಾಜಿ ಹುಲಿ ಸಂರಕ್ಷಿತಾರಣ್ಯದಿಂದ ಹರಿಯಾಣಕ್ಕೆ ಬಂದಿರಬೇಕು. ಇದು ಹರಿಯಾಣದಲ್ಲಿ ನೈಸರ್ಗಿಕ ಪರಿಸರ ವ್ಯವಸ್ಥೆ ಪುನರ್‌ಸ್ಥಾಪನೆಯಾಗುತ್ತಿರುವ ಪ್ರಮುಖ ಸೂಚನೆ ಎಂದು ಹರಿಯಾಣ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿನೀಶ್ ಗರ್ಗ್ ಬಣ್ಣಿಸಿದ್ದಾರೆ.
ಹರಿಯಾಣದಲ್ಲಿ ಸುಲ್ತಾನ್‌ಪುರ್ ನ್ಯಾಷನಲ್ ಪಾರ್ಕ್ ಮತ್ತು ಕಾಳೇಸರ್ ನ್ಯಾಷನಲ್ ಪಾರ್ಕ್ ಎಂಬ ಎರಡು ರಾಷ್ಟ್ರೀಯ ಉದ್ಯಾನಗಳು ಮಾತ್ರ ಇದ್ದು, ಈ ಭಾಗದಲ್ಲಿ ಸುಮಾರು 113 ವರ್ಷಗಳಿಂದ ಹುಲಿ ಕಾಣಿಸಿಕೊಂಡಿರುವ ದಾಖಲೆಗಳಿಲ್ಲ. ಚಿರತೆ, ಕರಡಿ, ಆನೆ, ಜಿಂಕೆ, ಕೃಷ್ಣಮೃಗ, ಹೆಬ್ಬಾವು ಸೇರಿದಂತೆ ಇತರೆ ವನ್ಯಜೀವಿಗಳು ಇದ್ದವೇ ಹೊರತು ಹುಲಿ ಇರಲಿಲ್ಲ ಎಂದು ತಿಳಿಸಿದ್ದಾರೆ.





