ನವದೆಹಲಿ: ಎಲ್ಗರ್ ಪರಿಷತ್ ಮತ್ತು ಮಾವೊವಾದಿ ಸಂಪರ್ಕದ ಪ್ರಕರಣದಲ್ಲಿ ಗೃಹ ಬಂಧನದಲ್ಲಿರುವ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವಲಖಾ ಅವರಿಗೆ ನೀಡಿರುವ ಪೊಲೀಸ್ ಭದ್ರತೆಯ ವೆಚ್ಚವಾಗಿ ₹8 ಲಕ್ಷ ಮೊತ್ತದ ಮತ್ತೊಂದು ಠೇವಣಿ ಇಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
0
samarasasudhi
ಏಪ್ರಿಲ್ 28, 2023
ನವದೆಹಲಿ: ಎಲ್ಗರ್ ಪರಿಷತ್ ಮತ್ತು ಮಾವೊವಾದಿ ಸಂಪರ್ಕದ ಪ್ರಕರಣದಲ್ಲಿ ಗೃಹ ಬಂಧನದಲ್ಲಿರುವ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವಲಖಾ ಅವರಿಗೆ ನೀಡಿರುವ ಪೊಲೀಸ್ ಭದ್ರತೆಯ ವೆಚ್ಚವಾಗಿ ₹8 ಲಕ್ಷ ಮೊತ್ತದ ಮತ್ತೊಂದು ಠೇವಣಿ ಇಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠವು, ಬಾಕಿ ಇರುವ ಭದ್ರತಾ ಶುಲ್ಕ ₹66 ಲಕ್ಷ ಮೊತ್ತದ ಬಿಲ್ ಅನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಸಲ್ಲಿಸಿದ ಬಳಿಕ ಈ ಆದೇಶ ನೀಡಿದೆ.
ಮುಂಬೈನ ಸಾರ್ವಜನಿಕ ಗ್ರಂಥಾಲಯದಿಂದ ಸ್ಥಳಾಂತರಿಸುವಂತೆ ಕೋರಿ ನವಲಖಾ ಸಲ್ಲಿಸಿರುವ ಅರ್ಜಿಯ ಬಗ್ಗೆ ಎರಡು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆಯೂ ರಾಜು ಅವರಿಗೆ ಪೀಠವು ನಿರ್ದೇಶನ ನೀಡಿದೆ.
ಅಲ್ಲದೇ ಗೌತಮ್ ನವಲಖಾ ಅವರು 45 ನಿಮಿಷಗಳ ಕಾಲ ನಡೆದಾಡಲು ಅವಕಾಶ ನೀಡುವಂತೆ ಇಟ್ಟಿರುವ ಕೋರಿಕೆಯನ್ನು ವಿಭಾಗೀಯ ಪೀಠವು ಪರಿಗಣಿಸಿದೆ.
ಇದಕ್ಕೂ ಮೊದಲು ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು, ನವಲಖಾ ಅವರಿಗೆ ವಾಕ್ ಮಾಡಲು ಅವಕಾಶ ನೀಡಿದರೆ ಅವರೊಂದಿಗೆ ಭದ್ರತಾ ಸಿಬ್ಬಂದಿಯೂ ವಾಕ್ ಮಾಡುವಂತೆ ಬಲವಂತಪಡಿಸಿದಂತಾಗುತ್ತದೆ ಎಂದು ಆಕ್ಷೇಪಿಸಿದರು. ಆಗ ನ್ಯಾಯಮೂರ್ತಿಗಳು, 'ಭದ್ರತೆಗೆ ಇರುವ ಪೊಲೀಸರೂ ವಾಕ್ ಮಾಡಲಿ ಬಿಡಿ, ಅರ್ಜಿದಾರರಿಂದ ಅವರಿಗೂ ಅನುಕೂಲವೇ, ಅವರೆಲ್ಲರೂ ಇನ್ನಷ್ಟು ಆಕರ್ಷಕರಾಗಿ ಕಾಣಿಸುತ್ತಾರೆ' ಎಂದೂ ಹೇಳಿದ್ದಾರೆ.
ಕಳೆದ ವರ್ಷದ ನವೆಂಬರ್ 10ರಿಂದ ಗೌತಮ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಗೃಹಬಂಧನದಲ್ಲಿರುವ ಅರ್ಜಿದಾರ ನವಲಖಾ ಅವರಿಗೆ ಸರ್ಕಾರವು ಲಭ್ಯವಿರುವ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲು ತಗಲುವ ವೆಚ್ಚವಾಗಿ ₹2.4 ಲಕ್ಷ ಠೇವಣಿ ಇಡುವಂತೆ ಸುಪ್ರೀಂ ಕೋರ್ಟ್ ಆರಂಭದಲ್ಲಿ ನವಲಖಾ ಅವರಿಗೆ ನಿರ್ದೇಶನ ನೀಡಿತ್ತು.