ನವದೆಹಲಿ: ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಅವರು ಕಾಂಗ್ರೆಸ್‌ನ ಮುಖ್ಯ ಸಚೇತಕ ಜೈರಾಮ್ ರಮೇಶ್ ವಿರುದ್ಧ ನೀಡಿರುವ ಹಕ್ಕುಚ್ಯುತಿ ದೂರನ್ನು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಿದ್ದಾರೆ.
0
samarasasudhi
ಏಪ್ರಿಲ್ 28, 2023
ನವದೆಹಲಿ: ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಅವರು ಕಾಂಗ್ರೆಸ್‌ನ ಮುಖ್ಯ ಸಚೇತಕ ಜೈರಾಮ್ ರಮೇಶ್ ವಿರುದ್ಧ ನೀಡಿರುವ ಹಕ್ಕುಚ್ಯುತಿ ದೂರನ್ನು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಿದ್ದಾರೆ.
'ಸಭಾಪತಿ ಪೀಠ ಕುರಿತು ಜೈರಾಮ್ ರಮೇಶ್ ಅವರು ಉದ್ದೇಶಪೂರ್ವಕವಾಗಿ ಹಾಗೂ ಅಗೌರವದ ಮಾತುಗಳನ್ನಾಡಿದ್ದಾರೆ' ಎಂದು ತ್ರಿವೇದಿ ನೀಡಿರುವ ದೂರನ್ನು ರಾಜ್ಯಸಭೆಯ ಉಪಸಭಾಪತಿ ಹರಿವಂಶ ನೇತೃತ್ವದ 10 ಜನ ಸದಸ್ಯರ ಸಮಿತಿಗೆ ಒಪ್ಪಿಸಲಾಗಿದೆ. ಸಭಾಪತಿ ಧನಕರ್ ಅವರ ಈ ನಿರ್ಧಾರದ ಕುರಿತು ರಾಜ್ಯಸಭಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಲಂಡನ್‌ಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂದು ಹೇಳಿದ್ದರು. ರಾಹುಲ್ ಅವರ ಈ ನಡೆಯನ್ನು ಧನಕರ್ ಟೀಕಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಜೈರಾಮ್ ರಮೇಶ್, 'ರಾಜ್ಯಸಭಾ ಸಭಾಪತಿಗಳು ಯಾವುದೇ ಆಡಳಿತ ಪಕ್ಷವೊಂದರ ಪರ ಜೈಕಾರ ಹಾಕುವವರಾಗಬಾರದು' ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಂಸದ ತ್ರಿವೇದಿ ಅವರು ಜೈರಾಮ್ ರಮೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸಭಾಪತಿ ಪೀಠಕ್ಕೆ ಅವಮಾನಿಸಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿಯ ಮತ್ತೊಬ್ಬ ಸಂಸದ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ದೂರು ದಾಖಲಿಸಿದ್ದು, ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ.