ನವದೆಹಲಿ: 'ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸದಸ್ಯ ರಾಷ್ಡ್ರಗಳು ಎಲ್ಲ ಬಗೆಯ ಭಯೋತ್ಪಾದನೆ ನಿರ್ಮೂಲನೆಗೆ ಒಟ್ಟಾಗಿ ಹೋರಾಡಬೇಕು. ಜೊತೆಗೆ, ಭಯೋತ್ಪಾದನೆಗೆ ಬೆಂಬಲಿಸುವವರ ಮೇಲೆ ಹೊಣೆಗಾರಿಕೆ ನಿಗದಿ ಮಾಡುವುದು ಅಗತ್ಯ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದರು.
ಎಸ್‌ಸಿಒ ರಕ್ಷಣಾ ಸಚಿವರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೋಕ್ಷವಾಗಿ ಪಾಕಿಸ್ತಾನ ಕುರಿತು ವಾಗ್ದಾಳಿ ನಡೆಸಿದರು.
'ಯಾವುದೇ ಸ್ವರೂಪದ ಭಯೋತ್ಪಾದನೆ ಕೃತ್ಯ ಅಥವಾ ಅದಕ್ಕೆ ಬೆಂಬಲ ನೀಡುವುದು ಮಾನವೀಯತೆ, ಶಾಂತಿಗೆ ವಿರುದ್ಧವಾದುದು. ಅಲ್ಲದೇ, ಭಯೋತ್ಪಾದನೆ ಮತ್ತು ಅಭಿವೃದ್ಧಿ ಒಟ್ಟಿಗೆ ಸಾಗಲು ಸಾಧ್ಯವಿಲ್ಲ' ಎಂದು ಪ್ರತಿಪಾದಿಸಿದರು.
'ಒಂದು ದೇಶ ಭಯೋತ್ಪಾದಕರಿಗೆ ಆಶ್ರಯ ನೀಡಿದರೆ, ಅದು ಜಗತ್ತಿಗೆ ಮಾತ್ರ ಬೆದರಿಕೆ ಒಡ್ಡುವುದಿಲ್ಲ ತನಗೂ ಅಪಾಯ ತಂದುಕೊಳ್ಳುತ್ತದೆ. ಯುವಕರನ್ನು ಉಗ್ರವಾದದ ಕಡೆಗೆ ವಾಲುವಂತೆ ಮಾಡುವುದು ಭದ್ರತೆ ದೃಷ್ಟಿಯಿಂದ ಆತಂಕದ ವಿಷಯ. ಈ ವಿದ್ಯಮಾನ, ಸಾಮಾಜಿಕ-ಆರ್ಥಿಕ ಪ್ರಗತಿಗೆ ಪ್ರಮುಖ ಅಡ್ಡಿಯಾಗುತ್ತದೆ' ಎಂದು ರಾಜನಾಥ್ ಸಿಂಗ್ ಹೇಳಿದರು.
'ಎಸ್‌ಸಿಒ ಜಾಗತಿಕ ಮಟ್ಟದಲ್ಲಿ ಪ್ರಬಲ ಹಾಗೂ ವಿಶ್ವಾಸಾರ್ಹ ಸಂಘಟನೆಯನ್ನಾಗಿ ಮಾಡಬೇಕು ಎಂದರೆ, ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವುದು ನಮ್ಮ ಆದ್ಯತೆಯಾಗಬೇಕು' ಎಂದು ಪ್ರತಿಪಾದಿಸಿದರು.
ಚೀನಾ ರಕ್ಷಣಾ ಸಚಿವ ಲಿ ಶಾಂಗ್‌ಫು ಸೇರಿದಂತೆ ಸದಸ್ಯ ರಾಷ್ಟ್ರಗಳ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪಾಕಿಸ್ತಾನ ರಕ್ಷಣಾ ಸಚಿವರು ವರ್ಚುವಲ್ ವಿಧಾನದ ಮೂಲಕ ಭಾಗವಹಿಸಿದ್ದರು.
ನವದೆಹಲಿಯಲ್ಲಿ ಶುಕ್ರವಾರ ನಡೆದ ಶಾಂಘೈ ಸಹಕಾರ ಸಂಘಟನೆಯ ರಕ್ಷಣಾ ಸಚಿವರ ಸಮಾವೇಶದಲ್ಲಿ ಸಚಿವ ರಾಜನಾಥ್ ಸಿಂಗ್ ಹಾಗೂ ರಷ್ಯಾದ ಸೆರ್ಗಿ ಶೊಯಿಗು ಹಸ್ತಲಾಘವ ಮಾಡಿದರು -ಪಿಟಿಐ ಚಿತ್ರHighlights - ಎಸ್‌ಸಿಒ ಅಧ್ಯಕ್ಷ ಸ್ಥಾನದಲ್ಲಿರುವ ಭಾರತದಿಂದ ಸಮಾವೇಶದ ಆತಿಥ್ಯ 2001ರಲ್ಲಿ ಸಂಘಟನೆ ಸ್ಥಾಪನೆ
. ವಿಶ್ವಸಂಸ್ಥೆಯ ತತ್ವಗಳ ಆಧಾರದಲ್ಲಿ ಶಾಂತಿ ಮತ್ತು ಭದ್ರತೆ ಖಾತರಿಪಡಿಸುವಲ್ಲಿ ನಂಬಿಕೆ ಹೊಂದಿದೆ ರಾಜನಾಥ್ ಸಿಂಗ್ ರಕ್ಷಣಾ ಸಚಿವ
'ಗಡಿ ಸಮಸ್ಯೆ: ಒಪ್ಪಂದದ ಪ್ರಕಾರವೇ ಬಗೆಹರಿಸಿಕೊಳ್ಳಬೇಕು' ಬೀಜಿಂಗ್ (ಪಿಟಿಐ): 'ಗಡಿಗೆ ಸಂಬಂಧಿಸಿದ ಒಪ್ಪಂದಗಳನ್ನು ಚೀನಾ ಉಲ್ಲಂಘಿಸಿರುವ ಪರಿಣಾಮ ಉಭಯ ದೇಶಗಳ ನಡುವಿನ ಸಂಬಂಧದ ಅಡಿಪಾಯವೇ ಕುಸಿದಂತಾಗಿದೆ. ಗಡಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ಒಪ್ಪಂದಗಳ ಪ್ರಕಾರವೇ ಬಗೆಹರಿಸಿಕೊಳ್ಳಬೇಕು' ಎಂದು ಸಚಿವ ರಾಜನಾಥ್ ಸಿಂಗ್ ಅವರು ಚೀನಾ ರಕ್ಷಣಾ ಸಚಿವ ಜನರಲ್ ಲಿ ಶಾಂಗ್‌ಫು ಅವರಿಗೆ ಹೇಳಿದರು. ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ರಕ್ಷಣಾ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ತೆರಳಿರುವ ಸಚಿವ ಶಾಂಗ್‌ಫು ಅವರು ರಾಜನಾಥ್ ಸಿಂಗ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಈ ಕುರಿತು ರಕ್ಷಣಾ ಸಚಿವಾಲಯ ಇಲ್ಲಿ ಪ್ರಕಟಣೆ ಬಿಡುಗಡೆ ಮಾಡಿದೆ. 'ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಾಂಗ್‌ಫು ಭಾರತ ಮತ್ತು ಚೀನಾ ಗಡಿಯಲ್ಲಿನ ಪರಿಸ್ಥಿತಿ ಸ್ಥಿರವಾಗಿದೆ. ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳ ಮೂಲಕ ಎರಡೂ ದೇಶಗಳ ನಡುವೆ ಸಂವಹನ ಮುಂದುವರಿದಿದೆ ಎಂಬುದಾಗಿ ಹೇಳಿದರು' ಎಂದು ಪ್ರಕಟಣೆ ತಿಳಿಸಿದೆ. 'ಪೂರ್ವ ಲಡಾಖ್ ಗಡಿಯಲ್ಲಿ ಸಂಘರ್ಷ ಕಂಡುಬಂದಿದ್ದ ಸ್ಥಳಗಳಿಂದ ಯೋಧರನ್ನು ಹಿಂತೆಗೆದುಕೊಳ್ಳುವಂತೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಉದ್ವಿಗ್ನತೆಯನ್ನು ಶಮನ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂಬುದಾಗಿ ರಾಜನಾಥ್ ಸಿಂಗ್ ತಿಳಿಸಿದರು'. ಉಭಯ ನಾಯಕರು ಗಡಿ ಹಾಗೂ ದ್ವಿಪಕ್ಷೀಯ ಸಂಬಂಧಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು ಎಂದೂ ಪ್ರಕಟಣೆ ತಿಳಿಸಿದೆ.





