ನವದೆಹಲಿ: ಭಾರತ್ ಜೋಡೊ ಯಾತ್ರೆಯ ಮೂಲಕ ರಾಹುಲ್ ಗಾಂಧಿಯವರು ಹೊಸ ರಾಷ್ಟ್ರೀಯ ನಿರೂಪಣೆಯನ್ನು ರಚಿಸಿದ್ದಾರೆ. ಇದರಿಂದ ಗಾಬರಿಗೊಂಡಿರುವ ಬಿಜೆಪಿಯು, ಆ ನಿರೂಪಣೆಯನ್ನು ತಿರುಚಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
ಆರ್ಥಿಕ ಅಸಮಾನತೆ ಹೆಚ್ಚುತ್ತಿರುವುದೇ ಹಣದುಬ್ಬರದ ಪ್ರಮಾಣ ಏರಿಕೆಗೆ ಪ್ರಮುಖ ಕಾರಣ ಎಂಬ ಬಗ್ಗೆ ಭಾರತ್ ಜೋಡೊ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಧ್ವನಿ ಎತ್ತಿದ್ದರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ಜೊತೆಗೆ 2013 ಹಾಗೂ 2023ರಲ್ಲಿ ದಿನ ಬಳಕೆ ವಸ್ತುಗಳ ಬೆಲೆಯಲ್ಲಿ ಆಗಿರುವ ಬದಲಾವಣೆಯನ್ನು ತೋರಿಸುವ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, 'ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯ ಮೂಲಕ ಹೊಸ ಹಾಗೂ ಶಕ್ತಿಶಾಲಿಯಾದ ರಾಷ್ಟ್ರೀಯ ನಿರೂಪಣೆಯನ್ನು ರಚಿಸಿದ್ದಾರೆ. ಇದರಿಂದ ಭೀತಿಗೊಂಡಿರುವ ಬಿಜೆಪಿಯು, ಆ ನಿರೂಪಣೆಯ ಹಳಿ ತಪ್ಪಿಸಲು (Derail), ತಿರುಚಲು (Distort), ಹೆಸರು ಕೆಡಿಸಲು (Defame) ಹಾಗೂ ದಿಕ್ಕು ತಪ್ಪಿಸಲು (Divert) ಪ್ರಯತ್ನಿಸುತ್ತಿದೆ. ದುಖಃಕರವಾದ ಸಂಗತಿಯಿಂದರೆ, ಅತ್ಯಂತ ತಟಸ್ಥ ಮತ್ತು ಉನ್ನತ ಸಂಸ್ಥೆಗಳೂ ಈ 4ಡಿ ದಾಳಿಯಲ್ಲಿ ತೊಡಗಿಕೊಂಡಿವೆ' ಎಂದು ಆರೋಪಿಸಿದ್ದಾರೆ.
'ಬಜೆಟ್ ಅಧಿವೇಶನದ ಎರಡನೇ ಅವಧಿಯೂ ಚರ್ಚೆ ಇಲ್ಲದೆ ಮುಕ್ತಾಯಗೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಧೋರಣೆಯೇ ಕಾರಣ. ಇದು ಹೀಗೆ ಮುಂದುವರಿದರೆ ಪ್ರಜಾಪ್ರಭುತ್ವ ಕಗ್ಗೊಲೆಯಾಗಿ ದೇಶವು ಸರ್ವಾಧಿಕಾರಿ ಆಡಳಿತದತ್ತ ಹೊರಳಲಿದೆ' ಎಂದು ಕಿಡಿ ಕಾರಿದ್ದ ಪ್ರತಿಪಕ್ಷಗಳು ಗುರುವಾರ ಒಗ್ಗಟ್ಟು ಪ್ರದರ್ಶಿಸಿದ್ದವು.
'ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಎದುರಾಗಿದೆ' ಎಂದು ಆರೋಪಿಸಿದ ವಿವಿಧ ಪಕ್ಷಗಳ ಸಂಸದರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಂಸತ್ ಭವನದಿಂದ ವಿಜಯ ಚೌಕದವರೆಗೂ 'ತಿರಂಗಾ ನಡಿಗೆ' ನಡೆಸಿದ್ದರು.
ಇದಾದ ಮರುದಿನವೇ, ಜೈರಾಮ್ ಬಿಜೆಪಿಯನ್ನು ಟೀಕಿಸಿದ್ದಾರೆ.






