ಕಾಸರಗೋಡು: ಜಿಲ್ಲೆಗೆ ಕೋಟ್ಯಂತರ ರೂ. ಮೌಲ್ಯದ ಹವಾಲಾ ಹಣ ರವಾನೆಯಾಗುತ್ತಿರುವ ಬಗ್ಗೆ ಇಂಟೆಲಿಜೆನ್ಸ್ ಏಜನ್ಸಿಗಳು ಮಾಹಿತಿ ನೀಡಿದೆ. ಮುಂಬೈ ಸೇರಿದಂತೆ ದೊಡ್ಡ ನಗರಗಳನ್ನು ಕೇಂದ್ರೀಕರಿಸಿ ಕೆಲವೊಂದು ಬೃಹತ್ ತಂಡಗಳು ಕಾಳಧನ ಸಾಗಾಟದಲ್ಲಿ ನಿರತವಾಗಿದೆ.
ಕಂಟೈನರ್, ವಿಮಾನ ಹಾಗೂ ಹವಾಲಾ ದಂಧೆಕೋರರ ಮೂಲಕ ತಲುಪುವ ಚಿನ್ನವನ್ನು ಮಾರಾಟ ಮಾಡಿ ಹಣ ಸಂಗ್ರಹಿಸಲಾಗುತ್ತಿದೆ. ಚಿನ್ನ ಸಾಗಾಟ ಸಂದರ್ಭ ಸೆರೆಗೀಡಾದಲ್ಲಿ ನಿಗದಿತ ದಂಡ ಪಾವತಿಸಿ ಚಿನ್ನ ಮರಳಿ ಪಡೆಯುತ್ತಿರುವುದರಿಂದ ಕಳ್ಳಸಾಗಾಟಗಾರರು ಚಿನ್ನ ಸಾಗಾಟವನ್ನು ಹಣಸಂಗ್ರಹಕ್ಕಿರುವ ಸುರಕ್ಷಿತ ಮಾರ್ಗವಾಗಿ ಕಂಡುಕೊಂಡಿರುವುದಾಗಿ ಇಂಟೆಲಿಜೆನ್ಸ್ ವರದಿಯಲ್ಲಿ ತಿಳಿಸಲಾಗಿದೆ.
ಮುಂಬೈ ಸೇರಿದಂತೆ ವಿವಿಧ ಕೇಂದ್ರಗಳಿಂದ ತಲಪುವ ಕಾಳಧನವನ್ನು ನಿಗದಿತ ಕೇಂದ್ರ ಹಾಗೂ ವ್ಯಕ್ತಿಗಳಿಗೆ ತಲುಪಿಸುವ ಪ್ರತ್ಯೇಕ ಏಜೆಂಟ್‍ಗಳು ಕಾರ್ಯಾಚರಿಸುತ್ತಿದ್ದಾರೆ. ಇವರಿಗೆ ಮಾಸಿಕ ವೇತನದ ಜತೆಗೆ ಪ್ರಯಾಣಕ್ಕೆ ವಾಹನ, ಆಹಾರ ಸೇರಿದಂತೆ ಇತರ ಖರ್ಚು ಲಭಿಸುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಈ ರೀತಿಯ ಹಲವು ಏಜೆಂಟ್‍ಗಳು ಕಾರ್ಯಾಚರಿಸುತ್ತಿದ್ದು, ವಿಶೇಷ ಕಾರ್ಯಾಚರಣೆ ಸಂದರ್ಭ ಸಣ್ಣ ಪ್ರಮಾಣದ ಮೊತ್ತದೊಂದಿಗೆ ಕೆಲವೇ ಏಜೆಂಟ್‍ಗಳನ್ನು ಮಾತ್ರ ಸೆರೆಹಿಡಿಯಲಾಗುತ್ತಿದೆ. ಈ ರೀತಿ ಸಂಗ್ರಹವಾಗುವ ಕಾಳಧನ ಯಾವ ಅಗತ್ಯಗಳಿಗಾಗಿ ವಿನಿಯೋಗಿಸಲಾಗುತ್ತಿದೆ ಎಂಬ ಬಗ್ಗೆಯೂ ಸಮಗ್ರ ತನಿಖೆಯ ಅಗತ್ಯವಿದೆ. ಈ ಹಿಂದೆ ಏಜೆಂಟ್‍ಗಳಾಗಿ ಚಟುವಟಿಕೆ ನಡೆಸುತ್ತಿದ್ದವರು ಹಾಗೂ ಬೇಗನೆ ಶ್ರೀಮಂತರಾದವರ ಮೇಲೂ ನಿಗಾ ಇರಿಸಲು ಇಂಟೆಲಿಜೆನ್ಸ್ ನಿರ್ದೇಶನ ನೀಡಿರುವುದಾಘಿ ಮಾಹಿತಿಯಿದೆ.





