ಕಾಸರಗೋಡು: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕಾರ್ಯನಿರಯ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ಹಾಗೂ ಕೊಚ್ಚಿನ್‍ಕನ್ನಡ ಸಂಘ ವತಿಯಿಂದ 'ಕೊಚ್ಚಿನ್ ಕನ್ನಡ ಸಂಸ್ಕøತಿ ಉತ್ಸವ-2023', ಸಾಧಕ ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಏ. 30ರಂದು ಎರ್ನಾಕುಳಂ ಟೌನ್ ಹಾಲ್‍ನಲ್ಲಿ ಜರುಗಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 9ಕ್ಕೆ ಕೊಚ್ಚಿ ಮಹಾನಗರ ಪಾಲಿಕೆ ವಠಾರದಿಂದ ಶೋಭಾಯಾತ್ರೆ ನಡೆಯುವುದು. ಮಹಾನಗರಪಾಲಿಕೆ ಸದಸ್ಯೆ ಆಶಾದಿಲೀಪ್ ಶೋಭಾಯಾತ್ರೆ ಉದ್ಘಾಟಿಸುವರು. ನಂತರ ನಡೆಯುವ ಸಮಾರಂಭವನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಉದ್ಘಾಟಿಸುವರು.
ಕರ್ನಾಟಕ ಕಾರ್ಯನಿರಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಸಾಧಕರಿಗೆ ಗೌರವಾರ್ಪಣೆ ನಡೆಯುವುದು. 'ಗಡಿನಾಡಿನಲ್ಲಿ ಕನ್ನಡ ಪತ್ರಿಕೋದ್ಯಮ'ವಿಷಯದಲ್ಲಿ ನಡೆಯುವ ವಿಚಾರಸಂಕಿರಣದಲ್ಲಿ ಕಲಬುರ್ಗಿ ಆಕಾಶವಾಣಿ ಪ್ರಭಾರ ನಿಲಯ ನಿರ್ದೇಶಕ ಡಾ. ಸದಾನಂದ ಪೆರ್ಲ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತರಾದ ಮನೋಹರ್ ಪ್ರಸಾದ್, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಯು.ಕೆ ಕುಮಾರ್‍ನಾಥ್ ವಿಚಾರ ಮಂಡಿಸುವರು. ತುಳು ಜಾನಪದ ನೃತ್ಯ, ಬಹುಭಾಷಾ ಕವಿಗೋಷ್ಠಿ, ಕನ್ನಡ-ಮಲಯಾಳ-ತುಳು ಜಾನಪದ ಕಾರ್ಯಕ್ರಮ, ಕೂಚುಪುಡಿ ನೃತ್ಯ, ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಬೊಂಬೆಯಾಟ, ನೃತ್ಯ-ಗಾಯನ, ಯೋಗನೃತ್ಯ, ಸಾಂಸ್ಕøತಿಕ ವೈವಿಧ್ಯ ನಡೆಯುವುದು.
ದತ್ತಿನಿಧಿ ಹಾಗೂ ಸನ್ಮಾನ ಸಮಾರಂಭದಲ್ಲಿ ಕೇರಳದ ಆರೋಗ್ಯ ಖಾತೆ ಸಚಿವೆ ವೀಣಾ ಜಾರ್ಜ್ ಉದ್ಘಾಟಿಸುವರು. ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಶೈಕ್ಷಣಿಕ ಹಾಗೂ ಸಾರ್ವಜನಿಕ ರಂಗಕ್ಕೆ ವಿಶೇಷ ಕೊಡುಗೆ ನೀಡಿದ, ಮಂಗಳೂರು ವಿಶ್ವ ವಿದ್ಯಾಲಯದಿಂದ ಗೌರವ ಡಕ್ಟರೇಟ್ ಪದವಿ ಪಡೆದ ಡಾ. ಹಾಜಿ ಯು. ಕೆ. ಮೋನು ಕಣಚೂರ್ ಅವರಿಗೆ ಸಾರ್ವಜನಿಕ ಸನ್ಮಾನ ನಡೆಯಲಿರವುದು. 'ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ'ಎಂಬ ಕೃತಿಯನ್ನು ಕರ್ನಾಟಕ ವಿಧಾನಪರಿಷತ್ ಸದಸ್ಯ ಬಿ.ಎಂ ಫಾರೂಕ್ ಬಿಡುಗಡೆಗೊಳಿಸುವರು. ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಸಿ. ಹೊರಟ್ಟಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡುವರು. ಸಂಸದ ಹೈಬಿ ಈಡನ್, ಶಾಸಕರಾದ ಕೆ. ಬಾಬು, ಟಿ.ಜೆ ವಿನೋದ್, ಎ.ಕೆ.ಎಂ ಅಶ್ರಫ್, ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಪಿ.ಎಸ್ ಹರ್ಷ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಕಲ್ಕೂರ ಪ್ರತಿಷ್ಠಾನದ ಎಸ್. ಪ್ರದೀಪ ಕುಮಾರ್ ಕಲ್ಕೂರ, ಕೆಯುಡಬ್ಲ್ಯೂಜೆ ಕಾರ್ಯದರ್ಶಿ ಜಿ.ಸಿ ಲೋಕೇಶ್ ಮುಕ್ಯ ಅತಿಥಿಗಳಾಗಿ ಭಾಗವಹಿಸುವರು.




