ನವದೆಹಲಿ: 'ಅತೀಕ್ ಮತ್ತು ಆತನ ತಮ್ಮ ಅಶ್ರಫ್‌ನನ್ನು ಪೊಲೀಸ್ ಕಾವಲಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಅವರನ್ನು ಮಾಧ್ಯಮಗಳ ಮುಂದೆ ಏಕೆ ಪರೇಡ್ ಮಾಡಲಾಯಿತು' ಎಂದು ಸುಪ್ರೀಂ ಕೋರ್ಟ್, ಉತ್ತರ ಪ್ರದೇಶ ಸರ್ಕಾರವನ್ನು ಶುಕ್ರವಾರ ಪ್ರಶ್ನಿಸಿದೆ.
0
samarasasudhi
ಏಪ್ರಿಲ್ 29, 2023
ನವದೆಹಲಿ: 'ಅತೀಕ್ ಮತ್ತು ಆತನ ತಮ್ಮ ಅಶ್ರಫ್‌ನನ್ನು ಪೊಲೀಸ್ ಕಾವಲಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಅವರನ್ನು ಮಾಧ್ಯಮಗಳ ಮುಂದೆ ಏಕೆ ಪರೇಡ್ ಮಾಡಲಾಯಿತು' ಎಂದು ಸುಪ್ರೀಂ ಕೋರ್ಟ್, ಉತ್ತರ ಪ್ರದೇಶ ಸರ್ಕಾರವನ್ನು ಶುಕ್ರವಾರ ಪ್ರಶ್ನಿಸಿದೆ.
ಉತ್ತರ ಪ್ರದೇಶದಲ್ಲಿ 2017ರಿಂದ ನಡೆದ 183 ಎನ್‌ಕೌಂಟರ್‌ಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿ ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಪ್ರಯಾಗರಾಜ್‌ನಲ್ಲಿ ನಡೆದ ಅತೀಕ್ ಮತ್ತು ಆಶ್ರಫ್ ಅವರ ಹತ್ಯೆಯ ಬಳಿಕ ಕೈಗೊಂಡ ಕ್ರಮಗಳ ಸ್ಥಿತಿಗತಿಯ ವರದಿಯನ್ನು ಸಲ್ಲಿಸುವಂತೆಯೂ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ದೀಪಂಕರ್ ದತ್ತ ಅವರ ನ್ಯಾಯಪೀಠವು, ಝಾನ್ಸಿಯಲ್ಲಿ ಅತೀಕ್‌ನ ಮಗ ಅಸದ್ ಮೇಲೆ ಪೊಲೀಸರು ನಡೆಸಿದ ಎನ್‌ಕೌಂಟರ್ ಬಗ್ಗೆಯೂ ಸರ್ಕಾರದಿಂದ ವರದಿ ಕೇಳಿದೆ.
'ಈ ಇಬ್ಬರನ್ನು (ಅತೀಕ್ ಮತ್ತು ಅಶ್ರಫ್) ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಮಾಹಿತಿ ಹತ್ಯೆ ಆರೋಪಿಗಳಿಗೆ ಹೇಗೆ ತಿಳಿಯಿತು? ಅವರನ್ನು ಆಸ್ಪತ್ರೆಯ ಪ್ರವೇಶ ದ್ವಾರದಿಂದಲೇ ಆಂಬುಲೆನ್ಸ್‌ನಲ್ಲಿ ಏಕೆ ಕರೆದೊಯ್ಯಲಿಲ್ಲ. ಅವರನ್ನು ಮಾಧ್ಯಮಗಳ ಮುಂದೆ ಏಕೆ ಕರೆತರಲಾಯಿತು' ಎಂದು ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ನ್ಯಾಯಪೀಠವು ಪ್ರಶ್ನಿಸಿತು.
ಇದಕ್ಕೆ ಉತ್ತರ ನೀಡಿದ ರೋಹಟಗಿ, 'ಹತ್ಯೆಯ ಕುರಿತು ರಾಜ್ಯ ಸರ್ಕಾರ ತನಿಖೆ ನಡೆಸುತ್ತಿದೆ ಮತ್ತು ಇದಕ್ಕಾಗಿ ತ್ರಿಸದಸ್ಯ ಆಯೋಗವನ್ನು ರಚಿಸಿದೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದೆ' ಎಂದರು.
183 ಎನ್‌ಕೌಂಟರ್‌ಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಬೇಕು ಹಾಗೂ ಅತೀಕ್, ಅಶ್ರಫ್ ಸಹೋದರರ ಪೊಲೀಸ್ ಕಸ್ಟಡಿ ಹತ್ಯೆಯ ಬಗ್ಗೆಯೂ ತನಿಖೆ ನಡೆಸಬೇಕು ಎಂದು ನ್ಯಾಯಪೀಠವು ಆದೇಶ ನೀಡಿತು.