ನವದೆಹಲಿ: 'ಉದ್ಯೋಗದಾತರು (ಕಂಪನಿ) ತಪ್ಪಾಗಿ ಹಣ ಕಡಿತಮಾಡಿ ಅದಕ್ಕೆ ಉದ್ಯೋಗಿಯನ್ನು ಹೊಣೆ ಮಾಡುವುದು, ಆತನಿಗೆ ಪಿಂಚಣಿ ನಿರಾಕರಿಸುವುದು ಸಲ್ಲ' ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
'ಉದ್ಯೋಗಿಯ ಸಂಬಳದಿಂದ ತಪ್ಪಾಗಿ ಹಣ ಕಡಿತ ಮಾಡಿರುವ ಮತ್ತು ಆತನನ್ನು ಕೇಂದ್ರೀಯ ಭವಿಷ್ಯ ನಿಧಿ (ಸಿಪಿಎಫ್) ಯೋಜನೆಯ ಸದಸ್ಯ ಎಂದು ಪರಿಗಣಿಸಿದ ಮಾತ್ರಕ್ಕೆ ಆತನಿಂದ ಪಿಂಚಣಿ ಹಕ್ಕು ಕಸಿಯುವಂತಿಲ್ಲ.
ಈ ಸಂಬಂಧ ಕಲ್ಕತ್ತ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ವಜಾಗೊಳಿಸಿದೆ.
ಅರ್ಜಿದಾರರಾದ ಆಶಿತ್ ಚಕ್ರವರ್ತಿ ಹಾಗೂ ಇತರರಿಗೆ ಪಿಂಚಣಿ ಹಣ ಬಿಡುಗಡೆ ಮಾಡುವಂತೆ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠವು ಸಾರಿಗೆ ನಿಗಮಕ್ಕೆ ಆದೇಶಿಸಿತ್ತು. ಕಳೆದ ವರ್ಷದ ಮಾರ್ಚ್ 5ರಂದು ಈ ಕುರಿತ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ತೀರ್ಪು ಎತ್ತಿಹಿಡಿದಿತ್ತು. ಸಾರಿಗೆ ನಿಗಮ ಹಾಗೂ ಇತರರು ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
'ಭವಿಷ್ಯ ನಿಧಿಗಾಗಿ ಉದ್ಯೋಗಿಯ ವೇತನದಿಂದ ನಿಯಮಿತವಾಗಿ ಹಣ ಕಡಿತ ಮಾಡಲಾಗಿತ್ತು. ಈ ಕುರಿತು ಅವರಿಗೆ ಮಾಹಿತಿಯನ್ನೂ ನೀಡಲಾಗಿತ್ತು. ಅದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ನಿವೃತ್ತಿಯ ನಂತರ ಈ ಕುರಿತು ಆಕ್ಷೇಪ ಎತ್ತಿದ್ದಾರೆ. ಹೀಗಾಗಿ ಪಿಂಚಣಿಯ ಪ್ರಯೋಜನ ಪಡೆಯಲು ಅವರಿಗೆ ಅವಕಾಶ ನೀಡಬಾರದು' ಎಂದು ಮೇಲ್ಮನವಿಯಲ್ಲಿ ಹೇಳಲಾಗಿತ್ತು.
'ನಾನು ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದೆ. ಹೀಗಿರುವಾಗ ನನ್ನ ವೇತನವನ್ನು ಸರಿಯಾಗಿ ಲೆಕ್ಕ ಹಾಕಿ ಅದರ ಆಧಾರದಲ್ಲಿ ಹಣ ಕಡಿತ ಮಾಡಬೇಕಿರುವುದು ನಿಗಮದ ಕರ್ತವ್ಯ. ನಿಗಮದಿಂದ ಆಗಿರುವ ತಪ್ಪಿಗಾಗಿ ನನ್ನನ್ನು ಪರಿತಪಿಸುವಂತೆ ಮಾಡುವುದು ಸರಿಯಲ್ಲ' ಎಂದು ಆಶಿತ್ ಚಕ್ರವರ್ತಿ ಅರ್ಜಿಯಲ್ಲಿ ತಿಳಿಸಿದ್ದರು.





