ನವದೆಹಲಿ: ವಿವಾದಿತ 'ದಿ ಕೇರಳ ಸ್ಟೋರಿ' ಚಲನಚಿತ್ರ ಪ್ರದರ್ಶನಕ್ಕೆ ತಮಿಳುನಾಡಿನಲ್ಲಿ ನಿಷೇಧ ಹೇರಿದ ಬೆನ್ನಲ್ಲೇ, ಪಶ್ಚಿಮ ಬಂಗಾಳ ಸರ್ಕಾರವೂ ಸೋಮವಾರ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಕೇರಳ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಚಿತ್ರಪ್ರದರ್ಶನ ಸುಸೂತ್ರವಾಗಿ ಸಾಗಿದೆ.
'ನಾನು ಈ ಚಿತ್ರವನ್ನು ನೋಡಿದ್ದೇನೆ. ಜನರನ್ನು ವಿಭಜಿಸುವ, ಅವರನ್ನು ಅಪಮಾನಿಸುವ ಬಿಜೆಪಿಯ ಹಲವು ಯತ್ನಗಳಲ್ಲಿ ಇದೂ ಒಂದು' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಸಿದರು.
'ಅವರು 'ಕಾಶ್ಮೀರಿ ಫೈಲ್ಸ್' ಚಿತ್ರ ಮಾಡಿದ್ದೇಕೆ? ಸಮಾಜದ ಒಂದು ವರ್ಗ ಅವಮಾನಿಸಲು. ಇದೇನಿದು ಕೇರಳ ಫೈಲ್ಸ್? ಕಾಶ್ಮೀರ ಜನರಿಗೆ ಅಪಮಾನಿಸಲು ಕಾಶ್ಮೀರಿ ಫೈಲ್ಸ್ ಮಾಡಿದರು. ಈಗ ಕೇರಳದ ಹೆಸರು ಕೆಡಿಸುತ್ತಿದ್ದಾರೆ. ಅವಮಾನಿಸುವ ತಮ್ಮ ಶೈಲಿಯನ್ನು ನಿತ್ಯವು ಮುಂದುವರಿಸಿದ್ದಾರೆ' ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
'ರಾಜ್ಯದಲ್ಲಿ ದ್ವೇಷ, ಹಿಂಸಾತ್ಮಕ ಕೃತ್ಯಗಳನ್ನು ತಡೆಯಲು ಹಾಗೂ ಶಾಂತಿ ರಕ್ಷಣೆಯ ದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ 'ಕೇರಳ ಸ್ಟೋರಿ' ಚಿತ್ರ ಪ್ರದರ್ಶನ ನಿಷೇಧಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು. ನಿಷೇಧ ಉಲ್ಲಂಘಿಸಿದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಚುನಾವಣೆಯ ರ‍್ಯಾಲಿಯೊಂದರಲ್ಲಿ ಚಿತ್ರವನ್ನು ಶ್ಲಾಘಿಸಿದ್ದರು. ಅದರ ಹಿಂದೆಯೇ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಸದ ತೇಜಸ್ವಿ ಸೂರ್ಯ ಅವರೂ ಯುವತಿಯರು ಈ ಚಿತ್ರ ವೀಕ್ಷಿಸಬೇಕು ಎಂದು ಕರೆ ನೀಡಿದ್ದರು. ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ಪ್ರದರ್ಶನ ಕಂಡ ಬಹುತೇಕ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು.
ಕೋರ್ಟ್‌ಗೆ ಹೋಗ್ತೇವೆ: ಪಶ್ಚಿಮ ಬಂಗಾಳ ಸರ್ಕಾರದ ಕ್ರಮವನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಮುಂಬೈನಲ್ಲಿ ಚಿತ್ರ ನಿರ್ಮಾಪಕ ವಿಪುಲ್ ಶಾ ಪ್ರತಿಕ್ರಿಯಿಸಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ನಿಷೇಧ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಚಿತ್ರ ಪ್ರದರ್ಶನ ನಿಷೇಧ ಕುರಿತಂತೆ ಮಮತಾ ಬ್ಯಾನರ್ಜಿ ಅವರ ನಿರ್ಧಾರ ಹೊರಬಿದ್ದಿರುವಂತೆಯೇ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಚಿತ್ರವನ್ನು ಬೆಂಬಲಿಸಿ ಮಾತನಾಡಿದ್ದಾರೆ.
'ಕೇರಳ ಸ್ಟೋರಿಯು ಧಾರ್ಮಿಕ ಮತಾಂತರ ಕುರಿತು ಚರ್ಚಿಸಲಿದೆ. ಪ್ರತಿ ಹೆಣ್ಣು ಮಕ್ಕಳು ಇದನ್ನು ವೀಕ್ಷಿಸಬೇಕು. ಜಾಗತಿಕ ಭಯೋತ್ಪಾದನೆಯ ಅಪಾಯಕಾರಿ ಸಂಚು ಕುರಿತು ತಿಳಿಯಬೇಕು' ಎಂದು ಠಾಕೂರ್ ಹೇಳಿದರು.
ಇನ್ನೊಂದೆಡೆ, ಗುವಾಹಟಿಯಲ್ಲಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, 'ನಾನು, ನನ್ನ ಕುಟುಂಬದ ಸದಸ್ಯರು ಹಾಗೂ ಸಂಪುಟ ಸಚಿವರು ಇದೇ 11 ರಂದು ಚಿತ್ರವನ್ನು ವೀಕ್ಷಿಸಲಿದ್ದೇವೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಸುದಿಪ್ತೋ ಸೇನ್ ನಿರ್ದೇಶನದ ಈ ಚಿತ್ರವು, ಕೇರಳದಲ್ಲಿ ಇಸ್ಲಾಂಗೆ ಯುವತಿಯರ ಮತಾಂತರ ಹಾಗೂ ಬಳಿಕ ಅವರನ್ನು ಇಸ್ಲಾಮಿಕ್ ಸ್ಟೇಟ್‌ನ ಉಗ್ರ ಸಂಘಟನೆಗಳಿಗೆ ನಿಯೋಜಿಸುವುದರ ಕಥಾಹಂದರ ಹೊಂದಿದೆ. ಮೇ 5ರಂದು ಚಿತ್ರ ಬಿಡುಗಡೆಯಾಗಿದ್ದು, ಅದಕ್ಕೂ ಮೊದಲೇ ಕಾನೂನಿನ ಮೂಲಕ ಬಿಡುಗಡೆ ತಡೆಯುವ ಯತ್ನವು ನಡೆದಿತ್ತು. ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಬಿಸಿ ಚರ್ಚೆಗೂ ಚಿತ್ರ ವಸ್ತುವಾಗಿತ್ತು.
ತಮಿಳುನಾಡಿನಲ್ಲಿ ಎರಡು ದಿನದ ಪ್ರದರ್ಶನ ಬಳಿಕ ಮೇ 7ರಂದು ಸರ್ಕಾರ ನಿಷೇಧ ಹೇರಿತ್ತು.
' ಚಿತ್ರ ಪ್ರದರ್ಶನಕ್ಕೆ ಭದ್ರತೆ ನೀಡಿ ಕೆಲ ಚಿತ್ರಮಂದಿರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದರಿಂದಾಗಿಯೂ ಚಿತ್ರಮಂದಿರಗಳಲ್ಲಿ ಹಾಜರಾತಿ ಕುಗ್ಗಿತ್ತು. ಚಿತ್ರಪ್ರದರ್ಶನ ನಿಲ್ಲಿಸಲು ತೀರ್ಮಾನಿಸಲಾಯಿತು' ಎಂದು ತಮಿಳುನಾಡು ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳ ಮಾಲೀಕರ ಸಂಘದ ಅಧ್ಯಕ್ಷ ತಿರುಪ್ಪೂರ್ ಎಂ.ಸುಬ್ರಹ್ಮಣಿಯಂ ಪ್ರತಿಕ್ರಿಯಿಸಿದರು.
ಕೇರಳದಲ್ಲಿ ಸುಮಾರು 30 ಚಿತ್ರಮಂದಿರಗಳಲ್ಲಿ ಪ್ರದರ್ಶನ ಸುಸೂತ್ರವಾಗಿ ನಡೆದಿದೆ. ಶುಕ್ರವಾರ ಪ್ರದರ್ಶನ ಹಿಂಪಡೆದಿದ್ದ ಕಡೆಯೂ ಪ್ರದರ್ಶನ ಪುನರಾರಂಭವಾಗಿದೆ. ಆದರೆ, ಗುಜರಾತ್‌ನಲ್ಲಿ 'ದ ಕೇರಳ ಸ್ಟೋರಿ' ಚಿತ್ರವು ವೀಕ್ಷಕರನ್ನು ಸೆಳೆಯಲು ವಿಫಲವಾಗಿದೆ.
'ಭಾನುವಾರ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಹಾಜರಾತಿ ಪ್ರಮಾಣ ಶೇ 35ರಷ್ಟಿತ್ತು. ಸೋಮವಾರ ಈ ಪ್ರಮಾಣ ಶೇ 10ಕ್ಕೆ ಇಳಿದಿದೆ' ಎಂದು ಗುಜರಾತ್ ಮಲ್ಟಿಪ್ಲೆಕ್ಸ್‌ಗಳ ಮಾಲೀಕರ ಸಂಘದ ಅಧ್ಯಕ್ಷ ಮನುಭಾಯ್ ಪಟೇಲ್ ಅವರು ಪ್ರತಿಕ್ರಿಯಿಸಿದರು.





