ವಿದ್ಯೆ ಕಲಿಸಿದ ಗುರು ದೇವರಿಗೆ ಸಮಾನ ಎಂಬ ಮಾತನ್ನು ಅನ್ವರ್ಥಗೊಳಿಸುವಂತೆ ವೃತ್ತಿಜೀವನದುದ್ದಕ್ಕೂ ತಮ್ಮ ನಿಸ್ವಾರ್ಥ ಸೇವೆಯಿಂದ ಮಕ್ಕಳ ಜ್ಞಾನದಾಹವನ್ನು ಇಂಗಿಸಿದವರು ಸುಚೇತ ಟೀಚರ್. ಸಹೋದ್ಯೋಗಿಗಳೊಂದಿಗೆ ಆತ್ಮೀಯ ಒಡನಾಟ, ಮಕ್ಕಳೊಂದಿಗೆ ಅಕ್ಕರೆಯ ಸಾಮೀಪ್ಯ, ಮುತುವರ್ಜಿಯಿಂದ ಕೂಡಿದ ದಕ್ಷ ಆಡಳಿತಕ್ಕೆ ಹೆಸರಾದ ಸೂರಂಬೈಲು ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುಚೇತ ಟೀಚರ್ ಎಪ್ರಿಲ್ 30ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.
ಮಂಜೇಶ್ವರ ತಾಲೂಕಿನ ಕಯ್ಯಾರು ಗ್ರಾಮದ ಕೊಳಂಜ ಎಂಬಲ್ಲಿ 1967 ಎಪ್ರಿಲ್ 24ರಂದು ವೆಂಕಟ್ರಮಣ ಕೊಳತ್ತಾಯ-ರತ್ನಾಂಗಿ ದಂಪತಿಗಳ ಸುಪುತ್ರಿಯಾಗಿ ಜನಿಸಿದ ಸುಚೇತ ಕೆ ಅವರಿಗೆ ಮೂವರು ಸಹೋದರಿಯರು ಹಾಗೂ ಒಬ್ಬ ಸಹೋದರರಿದ್ದಾರೆ. ಅಟ್ಟೆಗೋಳಿ ಶಾಲೆ, ಪೈವಳಿಕೆನಗರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಅವರು ಪ್ರೌಢಶಿಕ್ಷಣವನ್ನು ಕಾಯರ್ ಕಟ್ಟೆ ಶಾಲೆಯಲ್ಲಿ ಪಡೆದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಪಿಡಿಸಿ ಪೂರ್ತಿಗೊಳಿಸಿದ ನಂತರÀ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನೂ ಮಂಗಳೂರು ವಿಶ್ವವಿದ್ಯಾಲಯ ಮಾನಸಗಂಗೋತ್ರಿಯಲ್ಲಿ ಆಂಗ್ಲ ಭಾμÉಯಲ್ಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪಡೆದರು. ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ಕಾರಣ ಮೈಸೂರು ವಿಶ್ವವಿದ್ಯಾಲಯ ಮಂಗಳಗಂಗೋತ್ರಿಯಲ್ಲಿ ಶಿಕ್ಷಕ ತರಬೇತಿಯನ್ನು ಪಡೆದರು. ಕಾಲೇಜು ಶಿಕ್ಷಣ ನಡೆಸುತ್ತಿರುವಾಗಲೇ ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಿದ ಹಿರಿಮೆ ಅವರದು.
ತರಬೇತಿ ಮುಗಿಸಿ ಹೊರಬಂದ ಸುಚೇತ ಅವರು ಶ್ರೀಧವಳ ಕಾಲೇಜು ಮೂಡಬಿದಿರೆಯಲ್ಲಿ ಉಪನ್ಯಾಸಕಿಯಾಗಿ ಸೇವೆಸಲ್ಲಿಸಿ ಉದ್ಯೋಗ ಕ್ಷೇತ್ರಕ್ಕೆ ಕಾಲಿರಿಸಿದರು. ಕಾರ್ಕಳ ವೆಂಕಟರಮಣ ಪದವಿ ಕಾಲೇಜು, ಎಸ್ ವಿ ಎಸ್ ಬಂಟ್ವಾಳ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸಿ ಉಪ್ಪಳದ ರಾಮಕೃಷ್ಣ ವಿದ್ಯಾಲಯದಲ್ಲಿ ಮುಖ್ಯಶಿಕ್ಷಕಿಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ ಹಿರಿಮೆ ಅವರದ್ದು.
1990 ಫೆಬ್ರವರಿ 4ರಂದು ಅಂಚೆ ಕಛೇರಿ ಮುಖ್ಯಸ್ಥರಾದ ಮಧುಸೂದನ ರಾವ್ ರವರನ್ನು ವಿವಾಹವಾಗಿ ಸಾಂಸಾರಿಕ ಬಂಧನಕ್ಕೊಳಗಾದರು. 2003 ಡಿಸೆಂಬರ್ 29ರಂದು ಜಿವಿಎಚ್ ಎಸ್ ಎಸ್ ಕುಂಜತ್ತೂರಿನಲ್ಲಿ ಸರಕಾರಿ ಸೇವೆಗೆ ಪಾದಾರ್ಪಣೆ ಮಾಡಿದ ಸುಚೇತ ಟೀಚರ್ ಹದಿನೈದು ವರ್ಷಗಳ ಕಾಲ ಶಾಲಾ ಐಟಿ ಕೋರ್ಡಿನೇಟರ್ ಆಗಿ ಕರ್ತವ್ಯ ನಿರ್ವಹಿಸಿದರು. ಅದೇ ಶಾಲೆಯಲ್ಲಿ ಸುಮಾರು ಹತ್ತೊಂಭತ್ತು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಇವರು 2022 ಡಿಸೆಂಬರ್ 28ರಂದು ಸೂರಂಬೈಲು ಶಾಲೆಯ ಮುಖ್ಯಶಿಕ್ಷಕಿಯಾಗಿ ಭಡ್ತಿ ಹೊಂದಿದರು.
ಮಂಜೇಶ್ವರದ ಮಜಿಬೈಲು ದೇವಿಕೃಪಾ ನಿವಾಸದಲ್ಲಿ ಪತಿಯೊಂದಿಗೆ ವಾಸವಾಗಿರುವ ಸುಚೇತ ಕೆ ಅವರ ಮಗ ಅರ್ಜುನ್ ಇಂಜಿನಿಯರ್ ಹಾಗೂ ಸೊಸೆ ಕಾವ್ಯ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಮಗಳು ಅರುಣ ಹಾಗೂ ಅಳಿಯ ಸುಹಾಸ್ ಕೆದಿಲಾಯ ಇಂಜಿನಿಯರ್ ಆಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ತನ್ನ ವೈಶಿಷ್ಟ್ಯಪೂರ್ಣವಾದ ವ್ಯಕ್ತಿತ್ವದಿಂದ ವಿದ್ಯಾರ್ಥಿಗಳ, ರಕ್ಷಕರ, ಸಹೋದ್ಯೋಗಿಗಳ ಹೃದಯವನ್ನು ಗೆದ್ದ ಸುಚೇತ ಟೀಚರ್ ಎಪ್ರಿಲ್ 30ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರ ನಿವೃತ್ತ ಜೀವನವು ಸುಖ ಸಂತೋಷದಿಂದ ಕೂಡಿರಲಿ ಎಂಬುದೇ ನಮ್ಮೆಲ್ಲರ ಹಾರೈಕೆ.
- ರಕ್ಷಾ
ಜಿ ಎಚ್ ಎಸ್ ಸೂರಂಬೈಲು






