ಇಂಫಾಲ: 'ಹಿಂಸಾಚಾರದಿಂದ ನಲುಗಿದ್ದ ಮಣಿಪುರದಲ್ಲಿ ಜನಜೀವನವು ಸಹಜ ಸ್ಥಿತಿಯತ್ತ ಮರಳುತ್ತಿದೆ. ಸೋಮವಾರ ಕೆಲ ಗಂಟೆಗಳವರೆಗೆ ನಿಷೇಧಾಜ್ಞೆ ಸಡಿಲಿಸಿದ್ದರಿಂದಾಗಿ ನಾಗರಿಕರು ಮನೆಗಳಿಂದ ಹೊರಬಂದು ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
0
samarasasudhi
ಮೇ 09, 2023
ಇಂಫಾಲ: 'ಹಿಂಸಾಚಾರದಿಂದ ನಲುಗಿದ್ದ ಮಣಿಪುರದಲ್ಲಿ ಜನಜೀವನವು ಸಹಜ ಸ್ಥಿತಿಯತ್ತ ಮರಳುತ್ತಿದೆ. ಸೋಮವಾರ ಕೆಲ ಗಂಟೆಗಳವರೆಗೆ ನಿಷೇಧಾಜ್ಞೆ ಸಡಿಲಿಸಿದ್ದರಿಂದಾಗಿ ನಾಗರಿಕರು ಮನೆಗಳಿಂದ ಹೊರಬಂದು ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
'ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಸೇನೆಯ 100ಕ್ಕೂ ಅಧಿಕ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಸ್ಸಾಂ ರೈಫಲ್ಸ್, ಪಾರಾ ಮಿಲಿಟರಿ ಮತ್ತು ರಾಜ್ಯ ಪೊಲೀಸರನ್ನು ಒಳಗೊಂಡಂತೆ ಸುಮಾರು 10 ಸಾವಿರ ಭದ್ರತಾ ಸಿಬ್ಬಂದಿ ವಿವಿಧ ಸ್ಥಳಗಳಲ್ಲಿ ಮೊಕ್ಕಾಂ ಹೂಡಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
'ಭಾರತ-ಮ್ಯಾನ್ಮಾರ್ ಗಡಿ ಭಾಗ ಸೇರಿದಂತೆ ಗಲಭೆ ಪೀಡಿತ ಸ್ಥಳಗಳ ಮೇಲೆ ಕಣ್ಗಾವಲು ಇಡುವುದಕ್ಕಾಗಿ ಮಾನವರಹಿತ ವೈಮಾನಿಕ ವಾಹನಗಳು (ಯುಎವಿ) ಹಾಗೂ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ' ಎಂದು ರಕ್ಷಣಾ ಇಲಾಖೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ 5 ಗಂಟೆಯಿಂದ 8 ಗಂಟೆವರೆಗೂ ನಿಷೇಧಾಜ್ಞೆ ಸಡಿಲಿಸಲಾಗಿತ್ತು. ಈ ಅವಧಿಯಲ್ಲಿ ಇಂಫಾಲದಲ್ಲಿ ಆಟೊ ಸೇರಿದಂತೆ ಇತರೆ ವಾಹನಗಳ ಸಂಚಾರ ಕಂಡುಬಂತು. ರಾಜ್ಯದ ಹಲವೆಡೆ ಪೆಟ್ರೋಲ್ ಬಂಕ್‌ಗಳ ಎದುರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
'ಸಾವಿನ ನಿಖರ ಮಾಹಿತಿ ನೀಡುತ್ತಿಲ್ಲ' (ಕೋಲ್ಕತ್ತ ವರದಿ): 'ಮಣಿಪುರದ ಬಿಜೆಪಿ ಸರ್ಕಾರವು ಹಿಂಸಾಚಾರದಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದರ ಕುರಿತ ಮಾಹಿತಿ ನೀಡುತ್ತಿಲ್ಲ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
'ಮಣಿಪುರದಲ್ಲಿನ ಪರಿಸ್ಥಿತಿ ಅವಲೋಕಿಸುವುದಕ್ಕಾಗಿ ಕೇಂದ್ರ ಸರ್ಕಾರವು ತನ್ನ ಯಾವೊಬ್ಬ ಪ್ರತಿನಿಧಿಯನ್ನೂ ಆ ರಾಜ್ಯಕ್ಕೆ ಕಳುಹಿಸಿಲ್ಲ' ಎಂದು ದೂರಿದ್ದಾರೆ.
'ಕಂಡಲ್ಲಿ ಗುಂಡು ಆದೇಶದಿಂದಾಗಿ ಮಣಿಪುರದಲ್ಲಿ ಎಷ್ಟು ಮಂದಿ ಮೃತರಾಗಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. ಈ ಕುರಿತು ಸರ್ಕಾರವೂ ಸ್ಪಷ್ಟ ಮಾಹಿತಿ ಒದಗಿಸುತ್ತಿಲ್ಲ. ಅಲ್ಲಿನ ಪರಿಸ್ಥಿತಿ ನೋಡಿ ಆತಂಕಗೊಂಡಿದ್ದೇನೆ' ಎಂದಿದ್ದಾರೆ.