ಬದಿಯಡ್ಕ: ವರ್ಷಗಳಿಂದ ಕಾಲ್ನಡಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದ ಕುಂಬ್ಡಾಜೆ ತಲೆಬೈಲು ಜನತೆಗೆ ಕೊನೆಗೂ ಸಮಸ್ಯೆಗೆ ಪರಿಹಾರ ಲಭಿಸಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕುಂಬ್ಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲೆಬೈಲು ಲ್ಲಿ ನಿರ್ಮಿಸಿರುವ ರಿಂಗ್ ಚೆಕ್ ಡ್ಯಾಂ ಅನ್ನು ಪಂಚಾಯತ್ ಅಧ್ಯಕ್ಷ ಹಮೀದ್ ಪೊಸೋಳಿಕೆ ನಿನ್ನೆ ಉದ್ಘಾಟಿಸಿದರು.
ಹೊಳೆ ಬದಿಯ ಗೋಡೆಗಳ ಮೇಲೆ ಮಣ್ಣು ಶೇಖರಣೆಗೊಂಡು ಭೂಕುಸಿತ ಉಂಟಾಗಿ ಪಾದಚಾರಿ ಹಾಗೂ ವಾಹನ ಸಂಚಾರಕ್ಕೆ ತಲೆಬೈಲಿನ ಜನರು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದರು. 3.52 ಲಕ್ಷ ರೂ.ಗಳ ಅಂದಾಜಿನಲ್ಲಿ ಪೂರ್ಣಗೊಂಡ ಕಾಮಗಾರಿಗೆ 192 ಕೆಲಸದ ದಿನಗಳನ್ನು ವ್ಯಯಿಸಿದೆ. ಈ ನಿರ್ಮಾಣದಿಂದ ಜಲ ಸಂರಕ್ಷಣೆಗೆ ಹೊಸ ಮಾದರಿಯಾಗುವುದಲ್ಲದೆ ಎರಡು ವಾರ್ಡ್ (6,8) ನಡುವೆ ಸಂಚಾರಕ್ಕೆ ಅನುಕೂಲವಾಗಲಿದೆ. ಸಣ್ಣ ವಾಹನಗಳು ಹಾಗೂ ಪಾದಚಾರಿಗಳ ಓಡಾಟಕ್ಕೆ ತುಂಬಾ ಉಪಯುಕ್ತವಾಗುವ ರೀತಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿದೆ.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ, ವಾರ್ಡ್ ಸದಸ್ಯೆ ಸುನೀತಾ, ಪಂಚಾಯಿತಿ ಕಾರ್ಯದರ್ಶಿ, ವಿಇಒ, ಬ್ಲಾಕ್ ವಿಸ್ತರಣಾಧಿಕಾರಿ, ಕೃಷಿ ಅಧಿಕಾರಿ, ಬ್ಲಾಕ್ ಎಇ, ಉದ್ಯೋಗ ಖಾತ್ರಿ ಸಿಬ್ಬಂದಿ ಹಾಗೂ ಸ್ಥಳೀಯರು ಭಾಗವಹಿಸಿದ್ದರು.





