ಕಾಸರಗೋಡು: ಮಧೂರು ಗ್ರಾಮ ಪಂಚಾಯಿತಿ ನಾಗರಿಕ ಸೌಲಭ್ಯ ಕೇಂದ್ರ ಹಾಗೂ ಕುಟುಂಬಶ್ರೀ ಸಹಾಯ ಕೇಂದ್ರವನ್ನು ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಕಚೇರಿಗಳನ್ನು ಸಂಪರ್ಕಿಸುವ ಸಾರ್ವಜನಿಕರಿಗೆ ವಿವಿಧ ಇಲಾಖೆಗಳು ಮತ್ತು ಏಜೆನ್ಸಿಗಳಿಂದ ಪಡೆಯಬೇಕಾದ ಎಲ್ಲಾ ಸೇವೆ ಯಾ ಮಾಹಿತಿಗಳನ್ನು ಪಡೆಯಲು ನಿಖರವಾದ ಮತ್ತು ಸ್ಪಷ್ಟವಾದ ಸೂಚನೆಗಳೊಂದಿಗೆನೆರವು ನೀಡಲು ಮಧೂರು ಗ್ರಾಮ ಪಂಚಾಯಿತಿಯಲ್ಲಿ ನಾಗರಿಕ ಸಹಾಯ ಕೇಂದ್ರ ಆರಂಭಿಸಲಾಗಿದೆ.
ಮಧೂರು ಗ್ರಾಮ ಪಂಚಾಯಿತಿಯ ಕುಟುಂಬಶ್ರೀ ಹೆಲ್ಪ್ ಡೆಸ್ಕ್ ವ್ಯವಸ್ಥೆಯು ಪಂಚಾಯತ್ ಮುಂಭಾಗ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದು, ಹೆಲ್ಪ್ ಡೆಸ್ಕ್ ವ್ಯವಸ್ಥೆಯು ಸಾರ್ವಜನಿಕರಿಗೆ ಪಂಚಾಐಇತಿಯ ವಿವಿಧ ಸೇವೆಗಳನ್ನು ಆನ್‍ಲೈನ್‍ನಲ್ಲಿ ಪ್ರವೇಶಿಸಲು ಮತ್ತು ಪ್ರಮಾಣಪತ್ರ, ತೆರಿಗೆ ಮತ್ತು ಪರವಾನಗಿ ಶುಲ್ಕಗಳ ಪ್ರತಿಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡಲಿದೆ.
ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋದಾ ಎಸ್.ನಾಯಕ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಗಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪಿ. ಜ್ಯೋತಿಶ್ ಸ್ವಾಗತಿಸಿದರು. ಲೆಕ್ಕಾಧಿಕಾರಿ ಕೆ.ಕಿಶೋರ್ ವಂದಿಸಿದರು. ಕುಟುಂಬಶ್ರೀ ಹೆಲ್ಪ್ ಡೆಸ್ಕ್‍ಗೆ ಚಾಲನೆ ನೀಡಿದ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷ ಎ. ಸುಮಾಗೆ ಮೊದಲ ಸೇವೆಯೊಂದಿಗೆ ಚಟುವಟಿಕೆ ಆರಂಭಿಸಲಾಯಿತು.





