ಕಾಸರಗೋಡು: ಎಡರಂಗ ಸರ್ಕಾರದ 7 ವರ್ಷಗಳ ಆಡಳಿತದಲ್ಲಿ ವಿರೋಧ ಪಕ್ಷದ ನೌಕರರನ್ನು ಪತ್ತೆ ಹಚ್ಚಿ ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡುವ ದ್ರೋಹಕರ ಕೆಲಸ ಕೊನೆಗಾಣಿಸುವಂತೆ ಎನ್‍ಜಿಒ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಪಿ.ವಿ.ಮನೋಜ್ ತಿಳಿಸಿದ್ದಾರೆ.
ಅವರು ಕಾಞಂಗಾಡ್ ವ್ಯಾಪಾರ ಭವನ ಸಭಾಂಗಣದಲ್ಲಿ ನಡೆದ ಕೇರಳ ಎನ್‍ಜಿಒ ಸಂಘದ 38ನೇ ಕಾಸರಗೋಡು ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಶೇ.15ರಷ್ಟು ಕ್ಷಾಮ ಭತ್ತೆ ಹಾಗೂ ತಡೆಹಿಡಿಯಲಾದ ಲೀವ್ ಸರಂಡರ್ ಸೇರಿದಂತೆ ನೌಕರರಿಂದ ಕಸಿದು ತೆಗೆಯಲಾದ ಸವಲತ್ತುಗಳನ್ನು ಪುನ:ಸ್ಥಾಪಿಸಲು ಸರ್ಕಾರ ಸಿದ್ಧವಾಗಬೇಕು ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ವಿಜಯನ್ ಸಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಎ.ವಿ.ಕೇಶವನ್ ಕಣ್ಣೂರು ದಿಕ್ಸೂಚಿ ಭಾಷಣ ಮಾಡಿದರು. ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ವಿ.ವಿ.ಸತ್ಯನಾಥ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮನುಲಾಲ್ ಮೇಲತ್, ಪಿಂಚಣಿದಾರರ ಸಂಘದ ಜಿಲ್ಲಾಧ್ಯಕ್ಷ ಮುತ್ತುಕೃಷ್ಣನ್, ಗೆಜೆಟೆಡ್ ಅಧಿಕಾರಿಗಳ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ವಿಶ್ವನಾಥ್, ಎನ್‍ಟಿಯು ಜಿಲ್ಲಾಧ್ಯಕ್ಷ ಎಂ.ರಂಜಿತ್, ಎಬಿವಿಪಿ ಜಿಲ್ಲಾ ಕಾರ್ಯದರ್ಶಿ ವಿಷ್ಣುಗಣೇಶ್ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ಕರುಣಾಕರ ವಂದಿಸಿದರು. ಸಂಜೆ ನಡೆದ ಸಮಾರೋಪವನ್ನು ಎನ್ ಜಿಓ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀಮತಿ ಆರ್ಯ ಉದ್ಘಾಟಿಸಿದರು. ಈ ಸಂದರ್ಭ ಪದಾಧಿಕಾರಿಗಳ ಆಯ್ಕೆ ನಡೆಯಿತು. ವಿಜಯನ್ ಸಿ ಅಧ್ಯಕ್ಷ, ಶ್ಯಾಮ್ ಪ್ರಸಾದ್ ವಿ ಕಾರ್ಯದರ್ಶಿ ಮತ್ತು ಕರುಣಾಕರ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.





