HEALTH TIPS

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಪೊಲೀಸ್ ಸಿಬ್ಬಂದಿ ಹತ್ಯೆ, ಹಲವು ಮನೆಗಳು ಬೆಂಕಿಗಾಹುತಿ

               ಗುವಾಹಟಿ: 'ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ವಿಷ್ಣುಪುರ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಗುರುವಾರ ನಡೆಸಿರುವ ಗುಂಡಿನ ದಾಳಿಯಲ್ಲಿ ಪೊಲೀಸ್‌ ಸಿಬ್ಬಂದಿಯೊಬ್ಬರು ಹತರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

              'ಮಣಿಪುರ ರೈಫಲ್ಸ್‌ನ ಸಿಬ್ಬಂದಿ ಇದ್ದ ವಾಹನವು ಬೆಳಿಗ್ಗೆ 11 ಗಂಟೆ ಸುಮಾರಿಗೆ ತೊಂಗ್ಲಾವೊಬಿ ಗ್ರಾಮದ ಸಮೀಪ ಸಾಗುತ್ತಿದ್ದಾಗ ಅದರ ಮೇಲೆ ಗುಂಡಿನ ದಾಳಿ ನಡೆದಿದೆ. ಕುಕಿ ಬಂಡುಕೋರರೇ ಹೊಂಚು ಹಾಕಿ ಈ ದಾಳಿ ನಡೆಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ' ಎಂದು ಮೂಲಗಳು ತಿಳಿಸಿವೆ.

                ಕಾಂಗ್‌ಪೋಕ್‌ಪಿ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಈ ದಾಳಿ ನಡೆದಿದೆ.

ರಾಜ್ಯದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ ಎಂಬ ಆಶಾಭಾವನೆ ಮೂಡುತ್ತಿದ್ದ ಹೊತ್ತಿನಲ್ಲೇ ಕಾಂಗ್‌ಪೋಕ್‌ಪಿ ಜಿಲ್ಲೆಯಲ್ಲಿ ಕುಕಿ ಹಾಗೂ ಮೈತೇಯಿ ಸಮುದಾಯದ ಜನರಿಗೆ ಸೇರಿದ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದರಿಂದ ಕೆರಳಿದ್ದ ಕುಕಿ ಸಮುದಾಯದ ಜನರು ಎಂಟು ಸ್ಥಳಗಳಲ್ಲಿ ಪ್ರತಿಭಟನೆ ಕೈಗೊಂಡಿದ್ದರು. ರಾಷ್ಟ್ರೀಯ ಹೆದ್ದಾರಿ-2 ಅನ್ನು ಬಂದ್‌ ಮಾಡಿದ್ದ ಅವರು ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ನಾಗಾಲ್ಯಾಂಡ್‌ನ ದಿಮಾಪುರದಿಂದ ಮಣಿಪುರದ ರಾಜಧಾನಿ ಇಂಫಾಲ್‌ಗೆ ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದ ಟ್ರಕ್‌ಗಳನ್ನೂ ತಡೆದಿದ್ದರು.

                 ರಾಜ್ಯದಲ್ಲಿ ಇದೇ 3 ರಿಂದ 6ರವರೆಗೆ ನಡೆದಿದ್ದ ಗಲಭೆ ವೇಳೆ ದುಷ್ಕರ್ಮಿಗಳು ಭದ್ರತಾ ಸಿಬ್ಬಂದಿಯಿಂದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪೈಕಿ ಸುಮಾರು 300 ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿದ್ದ ಭದ್ರತಾ ಪಡೆಯವರು ಇನ್ನೂ 800 ಶಸ್ತ್ರಾಸ್ತ್ರಗಳ ಪತ್ತೆಗಾಗಿ ಕೂಂಬಿಂಗ್‌ ಕಾರ್ಯಾಚರಣೆ ಕೈಗೊಂಡಿದ್ದವು. ಈ ವೇಳೆ ಹಿಂಸಾಚಾರ ಶುರುವಾಗಿತ್ತು.

             ಪೂರ್ವ ಇಂಫಾಲ್‌ ಜಿಲ್ಲೆಯಲ್ಲಿ ಕುಕಿ ಬಂಡುಕೋರರು ಬುಧವಾರ ನಡೆಸಿದ್ದ ಗುಂಡಿನ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಯೋಧರೊಬ್ಬರು ಗಾಯಗೊಂಡಿದ್ದರು.

                                         ಪೂರ್ವಯೋಜಿತ ಕೃತ್ಯ: ಕಾಂಗ್ರೆಸ್‌ ಆರೋಪ

                 'ಮಣಿಪುರ ಹಿಂಸಾಚಾರವು ಪೂರ್ವ ಯೋಜಿತ ಕೃತ್ಯದಂತೆ ಭಾಸವಾಗುತ್ತಿದೆ. ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೂಡಲೇ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು' ಎಂದು ಕಾಂಗ್ರೆಸ್‌ ಒತ್ತಾಯಿಸಿದೆ. 'ಹಿಂಸಾಚಾರದಲ್ಲಿ ಸಾವಿಗೀಡಾದವರ ಕುಟುಂಬದವರಿಗೆ ತಲಾ ₹20 ಲಕ್ಷ ನೆರವು ನೀಡಬೇಕು. ಮನೆ ಕಳೆದುಕೊಂಡವರಿಗೆ ತಲಾ ₹5 ಲಕ್ಷ ಪರಿಹಾರ ಒದಗಿಸಬೇಕು' ಎಂದು ಕಾಂಗ್ರೆಸ್‌ ವಕ್ತಾರ ಹಾಗೂ ಮಣಿಪುರದ ಉಸ್ತುವಾರಿಯಾಗಿರುವ ಭಕ್ತ ಚರಣ್‌ ದಾಸ್‌ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು 'ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಈವರೆಗೂ ರಾಜ್ಯಕ್ಕೆ ಏಕೆ ಭೇಟಿ ಕೊಟ್ಟಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇಕೆ ಮೌನಕ್ಕೆ ಶರಣಾಗಿದ್ದಾರೆ' ಎಂದು ಪ್ರಶ್ನಿಸಿದ್ದಾರೆ. 'ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರವು ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಗಲಭೆಗೆ ಕಡಿವಾಣ ಹಾಕುವಲ್ಲೂ ಹಿಂದೆ ಬಿದ್ದಿದೆ' ಎಂದು ದೂರಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries