ಮುಳ್ಳೇರಿಯ: ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಕೀರಿಕ್ಕಾಡು ನಾರಾಯಣ ಭಟ್ ಬಾಳಿಲ ಮತ್ತು ಮನೆಯವರಿಂದ ಹಿರಿಯ ಯಕ್ಷಗಾನ ಕಲಾ ಚೇತನ, ಕೀರ್ತಿ ಶೇಷ ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ಟರ ಸಂಸ್ಮರಣೆ, ವಿಶೇಷ ಯಕ್ಷಗಾನ ತಾಳಮದ್ದಳೆ ಇಂದ್ರಜಿತು ಕಾಳಗ ಶನಿವಾರ ನಡೆಯಿತು.
ಶ್ರೀ ಗೋಪಾಲಕೃಷ್ಣ ದೇವರ ಪೂಜಾರ್ಚನೆಯೊಂದಿಗೆ ಆರಂಭಗೊಂಡ ಸಂಸ್ಮರಣಾ ಕಾರ್ಯಕ್ರಮದದಲ್ಲಿ ಡಾ. ಸೂರ್ಯನಾರಾಯಣ ಭಟ್ ಅವರು ಸಬಾಧ್ಯಕ್ಷತೆಯನ್ನು ವಹಿಸಿದ್ದರು. ಶಿವಶಂಕರ ಭಟ್ ದಿವಾಣ ಸುಬ್ರಹ್ಮಣ್ಯ ಭಟ್ಟರ ನೆನಪುಗಳನ್ನೂ, ನವರಸಗಳ ಭಾವನೆಯೊಂದಿಗೆ ಅವರ ಅರ್ಥಗಾರಿಕೆಯ ವೈಶಿಷ್ಟ್ಯ ಸಹಿತ ಪರಿಚಯಿಸಿ ಪುಣ್ಯಸಂಸ್ಮರಣೆಗೈದರು. ಡಾ. ಸುಬ್ಬಣ್ಣಯ್ಯ ಕೋಟಿಗದ್ದೆ, ಸದಾಶಿವ ರೈ ಬೆಳ್ಳಿಪ್ಪಾಡಿ, ವಿಶ್ವವಿನೋದ ಬನಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಮಾನಂದ ರೈ ಸ್ವಾಗತಿಸಿ, ನಾರಾಯಣ ಭಟ್ ವಂದಿಸಿದರು. ಶ್ವೇತಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಂಘದ ಕಾರ್ಯದರ್ಶಿ, ಹಿರಿಯ ಭಾಗವತ ಗುರು ವಿಶ್ವವಿನೋದ ಬನಾರಿಯವರ ನಿರ್ದೇಶನದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಮೋಹನ ಮೆಣಸಿನಕಾನ ಸಹಕರಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ವಿಷ್ಣುಶರಣ ಬನಾರಿ, ಸ್ಕಂದ ದಿವಾಣ, ನಾರಾಯಣ ಪಾಟಾಳಿ ಮಯ್ಯಾಳ, ಕಲ್ಲಡ್ಕ ಶಿವರಾಮ ಕಲ್ಲೂರಾಯ ಭಾಗವಹಿಸಿದ್ದರು. ಅರ್ಥಧಾರಿಗಳಾಗಿ, ಡಿ.ವೆಂಕಟ್ರಮಣ ಮಾಸ್ತರ್ (ಶ್ರೀ ರಾಮ),ಯಂ. ರಮಾನಂದ ರೈ (ರಾವಣ), ಯಂ. ರಾಮನಾಯ್ಕ ದೇಲಂಪಾಡಿ (ದೂತ, ಶುಕ್ರಾಚಾರ್ಯ) ಸದಾಶಿವ ರೈ, ಗಣೇಶ್ ಶರ್ಮ (ಇಂದ್ರಜಿತು), ಸೂರ್ಯನಾರಾಯಣ ಭಟ್ (ಹನುಮಂತ) ಐತ್ತಪ್ಪ ಗೌಡ ಮುದಿಯಾರು (ಮಾಯಾಸೀತೆ), ಶಿವಶಂಕರ ಭಟ್ ದಿವಾಣ (ಜಾಂಬವಂತ), ವೀರಪ್ಪ ಸುವರ್ಣ (ವಿಭೀಷಣ), ಜಯರಾಮ ಭಟ್ ದೇವಸ್ಯ ನೀರ್ಚಾಲು (ಲಕ್ಷ್ಮಣ) ಪಾತ್ರವರ್ಗ ನಿರ್ವಹಿಸಿದರು. ನಂದಕಿಶೋರ ಬನಾರಿ, ಹಾಗೂ ಸ್ಥಳೀಯ ಪ್ರಮುಖರು ಮತ್ತು ಸಂಘದ ಸದಸ್ಯರು ಸಹಕರಿಸಿದರು.




.jpg)
.jpg)
