ಕೇಪ್ ಟೌನ್: 'ದೇಶದಿಂದ ಹೊರಗೆ ಕಾಲಿಟ್ಟಾಗ ಸಂಗತಿಗಳು ಕೆಲವೊಮ್ಮೆ ರಾಜಕೀಯಕ್ಕಿಂತ ದೊಡ್ಡದಿರುತ್ತವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಹೇಳಿದರು. ಸದ್ಯ ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೇಲಿಂದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತು ಕೇಂದ್ರ ಸರ್ಕಾರನ್ನು ಟೀಕಿಸುತ್ತಿರುವ ಬೆನ್ನಲ್ಲೇ ಜೈಶಂಕರ್ ಹೀಗೆ ಹೇಳಿದರು.
ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಶನಿವಾರ ನಡೆದ 'ಬ್ರಿಕ್ಸ್' ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಭಾರತೀಯ ಸಮುದಾಯ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದರು.
'ವಿದೇಶ ಪ್ರವಾಸ ಕೈಗೊಂಡ ವೇಳೆ ನಾನು ನನ್ನ ವಿಚಾರಗಳ ಬಗ್ಗೆ ಮಾತನಾಡಬಹುದು. ಹೋದಲ್ಲಿ ರಾಜಕೀಯ ಮಾಡಲಾಗದು. ತಾಯ್ನೆಲದಲ್ಲಿ ನಾನು ಚರ್ಚೆಯಲ್ಲಿ ಪಾಲ್ಗೊಳ್ಳಲು ಸಮರ್ಪಕವಾಗಿ ತಯಾರಾಗಿರುತ್ತೇನೆ ಮತ್ತು ಹುರುಪಿನಿಂದ ವಾದಿಸುತ್ತೇನೆ. ಆದರೆ ವಿದೇಶದಲ್ಲಿ ಹಾಗೆ ಮಾಡಲಾಗುವುದಿಲ್ಲ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.