ಬದಿಯಡ್ಕ :'ಯಕ್ಷಗಾನದ ಬಣ್ಣಗಾರಿಕೆಯು ಅತ್ಯಂತ ಆಳ ಹಾಗೂ ವಿಸ್ತಾರವಾಗಿದ್ದು, ಪ್ರತಿಯೊಂದು ಪಾತ್ರದ ಚಿತ್ರಣಕ್ಕೂ ವಿಶೇಷ ಅರ್ಥಗಳಿವೆ. ಮುಖದ ಬಣ್ಣಗಾರಿಕೆಯ ಮೂಲಕ ಪಾತ್ರದ ಸ್ವಭಾವವನ್ನು ತಿಳಿಯಬಹುದು. ಆದ್ದರಿಂದ ಬಣ್ಣಗಾರಿಕೆಯು ಸಣ್ಣ ಅವಧಿಯಲ್ಲಿ ಕಲಿಯುವಷ್ಟು ಸಣ್ಣ ವಿಷಯವಲ್ಲ. ಅದು ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷವಾದ ಬೃಹತ್ ಮಾಹಿತಿ ಕೋಶ' ಎಂದು ಯಕ್ಷಗಾನ ಹಿಮ್ಮೇಳ-ಮುಮ್ಮೇಳ ಶಿಕ್ಷಕ ಬಾಯಾರು ಸೂರ್ಯನಾರಾಯಣ ಪದಕಣ್ಣಾಯ ಹೇಳಿದರು.
ಅವರು ಅವರು ಇತ್ತೀಚೆಗೆ ನೀರ್ಚಾಲಿನ ಎಂಎಸ್‍ಸಿ ಎಎಲ್‍ಪಿ ಶಾಲೆಯಲ್ಲಿ ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ನಡೆದ ಗ್ರಾಮ ಪರ್ಯಟನೆಯ 4ನೇ ಸರಣಿ ಕಾರ್ಯಕ್ರಮದಲ್ಲಿ ಯಕ್ಷಗಾನ ಬಣ್ಣಗಾರಿಕಾ ಶಿಬಿರದ ನೇತೃತ್ವ ವಹಿಸಿ ಮಾತನಾಡಿದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹಿರಿಯ ಪ್ರಸಾದನಾ ಕಲಾವಿದ ಕೇಶವ ಕಿನ್ಯ ಮಾತನಾಡಿ,''ಕಲಾವಿದರು ತಮ್ಮ ಕಲೋಪಾಸನೆಯಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು. ಅವರು ತಮ್ಮ ಕಲಾ ಜೀವನದಲ್ಲಿ ಕಲಿಯಬೇಕಾಗಿರುವುದು ಅನೇಕ ಇದೆಯೆಂಬ ಪ್ರಜ್ಞೆ ಅವರಲ್ಲಿ ಯಾವತ್ತೂ ಇರಬೇಕು' ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯಕ್ಷಗಾನ ವೇಷಭೂಷಣ ತಯಾರಕ ಜಗದೀಶ ಬದಿಯಡ್ಕ ಮಾತನಾಡಿ,'ಯಕ್ಷಗಾನ ಬಣ್ಣಗಾರಿಕೆಯಲ್ಲಿ ನಿರಂತರ ಅಧ್ಯಯನ ಮಾಡುವುದರಿಂದ ಮಾತ್ರ ಬೆಳವಣಿಗೆ ಸಾಧಿಸಲು ಸಾಧ್ಯ' ಎಂದು ಹೇಳಿದರು. ಶಿಬಿರಾರ್ಥಿಯಾಗಿ ಭಾಗವಹಿಸಿದ್ದ ಭಾಗ್ಯಶ್ರೀ ಕುಂಚಿನಡ್ಕ ಅವರು ಮಾತನಾಡಿ,'ಉತ್ತಮ ಮುಖವರ್ಣಿಕೆ ಮೂಡಿ ಬರಲು ಸತತ ಪರಿಶ್ರಮ ಹಾಗೂ ಮಾಹಿತಿಗಳ ಕ್ರೋಡೀಕರಣ ಅಗತ್ಯ. ಈ ಬಗ್ಗೆ ಶಿಬಿರದಲ್ಲಿ ಉತ್ತಮ ಮಾರ್ಗದರ್ಶನ ದೊರೆಯಿತು. ಯಕ್ಷಗಾನದ ಬಣ್ಣಗಾರಿಕೆಯಲ್ಲಿನ ಸೂಕ್ಷ್ಮಗಳನ್ನು ಅರಿತುಕೊಳ್ಳಲು ಈ ಶಿಬಿರ ಸಹಕಾರ ನೀಡಿದೆ ಎಂದು ಹೇಳಿದರು. ಶಿಬಿರದಲ್ಲಿ ಯಕ್ಷಗಾನದ ಬಣ್ಣಗಾರಿಕೆಗೆ ಸಂಬಂಧಿಸಿದ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳ ಮಾಹಿತಿ ನೀಡಲಾಯಿತು. ದೇವತಾ ಬಲ, ದೇವೇಂದ್ರ, ವಿಷ್ಣು, ಹನುಮಂತ, ಕೇಸರಿ ತಟ್ಟೆ ವೇಷ, ರಾಕ್ಷಸ ಬಲ ಮೊದಲಾದ ವೇಷಗಳಿಗೆ ಸ್ವತ: ಕಲಾವಿದರೇ ಬಣ್ಣಗಾರಿಕೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು. ಶಿಬಿರದಲ್ಲಿ ಸುಮಾರು 30 ಮಂದಿ ವಿವಿಧ ವಯೋಮಾನದ ಹವ್ಯಾಸಿ ಕಲಾವಿದರು ಭಾಗವಹಿಸಿದ್ದರು. ರಂಗಸಿರಿ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ ಪುಂಡೂರು ಪ್ರಭಾವತಿ ಕೆದಿಲಾಯ, ಕಾರ್ಯದರ್ಶಿ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ಮೊದಲಾದವರು ಇದ್ದರು. ಮನ್ವಿತ್ ನಾರಾಯಣಮಂಗಲ ವಂದಿಸಿದರು.




.jpg)
